ಬೆಂಗಳೂರು: ಎಎಸ್‌ಪಿ ನಾರಾಯಣ ಭರಮನಿ ಮೇಳೆ ಬಹಿರಂಗವಾಗಿ ವೇದಿಕೆ ಮೇಲೆ ಕೈ ಎತ್ತುವ ಮೂಲಕ ಸಿಎಂ ಸಿದ್ದರಾಮಯ್ಯ ದರ್ಪ ಪ್ರದರ್ಶನ ಮಾಡಿದ್ದಾರೆ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಎರಡು-ಮೂರು ತಿಂಗಳ ಹಿಂದೆ ವಿಜಯನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತುಂಬಿದ ವೇದಿಕೆಯ ಮೇಲೆ ದಲಿತ ಸಮುದಾಯಕ್ಕೆ ಸೇರಿದ ಜಿಲ್ಲಾಧಿಕಾರಿ ದಿವಾಕರ್ ಅವರಿಗೆ ಏಕವಚನದಲ್ಲಿ ನಿಂದಿಸಿ 'ಇಲ್ಯಾಕೆ ಕೂತಿದ್ದೀಯಾ' ಎಂದು ದರ್ಪ ಪ್ರದರ್ಶನ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗಾವಿಯಲ್ಲಿ ಎಎಸ್‌ಪಿ ನಾರಾಯಣ ಭರಮನಿ ಅವರ ಮೇಲೆ ಬಹಿರಂಗ ವೇದಿಕೆಯ ಮೇಲೆ ಕೈ ಎತ್ತುವ ಮೂಲಕ ಮತ್ತೊಮ್ಮೆ ತಮ್ಮ ಅಧಿಕಾರದ ಮದವನ್ನ ಪ್ರದರ್ಶನ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಅಧಿಕಾರಿಗಳು ನಿಮ್ಮ ಮನೆಯ ಜೀತದಾಳುಗಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಂಗಕ್ಕೆ ತನ್ನದೇ ಆದ ಸ್ಥಾನಮಾನ ಇದೆ. ನಿಮ್ಮ ದುರ್ವರ್ತನೆ, ದುರ್ನಡತೆಯಿಂದ ರಾಜ್ಯದ ಮರ್ಯಾದೆ ಹರಾಜಾಗುತ್ತಿದೆ. ಗೌರವ ಕೊಟ್ಟು ಗೌರವ ಪಡೆಯುವುದನ್ನ ಕಲಿಯಿರಿ.