Select Your Language

Notifications

webdunia
webdunia
webdunia
webdunia

ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಕಟ್ಟಡದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿ

ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಕಟ್ಟಡದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿ
bangalore , ಶನಿವಾರ, 2 ಅಕ್ಟೋಬರ್ 2021 (22:05 IST)
ಬೆಂಗಳೂರು: ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಕಟ್ಟಡದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸಲು ನಗರದ ಅರಮನೆ ರಸ್ತೆಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕಟ್ಟಡದ ಮೊದಲನೇ ಮಹಡಿಯ ಎರಡು ಕೊಠಡಿಗಳನ್ನು ಸುಪರ್ದಿಗೆ ಪಡೆಯಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಈ ಕುರಿತು ತುಮಕೂರಿನ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರ್ ಗೌಡ ಅವರು ಈ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ಮೊದಲನೇ ಮಹಡಿಯ ಕೊಠಡಿ 6 ಮತ್ತು 8 ಅನ್ನು 2021ರ ಸೆ.21ರಂದು ಹೈಕೋರ್ಟ್ ವಿಶೇಷ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ತಳಮಹಡಿಯಲ್ಲಿರುವ ಕೋರ್ಟ್ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸಲು ನಿರ್ದೇಶನ ಕೋರಿ ಹೈಕೋರ್ಟ್ ಕಟ್ಟಡ ಸಮಿತಿಗೆ ಮನವಿ ಮಾಡಲಾಗಿದೆ. ಸಮಿತಿಯ ನಿರ್ದೇಶನಕ್ಕೆ ಕಾಯುತ್ತಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ, ನಗರದ ಆನಂದ್‌ ರಾವ್ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಇಂಧನ ಭವನದಲ್ಲಿ ಒಂದು ಲಕ್ಷ ಚದರ ಅಡಿ ನಿರ್ಮಿತ ಪ್ರದೇಶವನ್ನು ಹೈಕೋರ್ಟ್‌ಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೆ.16ರಂದು ಕೋರಲಾಗಿದೆ. ಮಹಡಿಯ ನಕ್ಷೆ ಒದಗಿಸಲಾಗಿದೆ. ಆ ಜಾಗವು ಹೈಕೋರ್ಟ್ ಬಳಕೆಗೆ ಮೀಸಲಿಟ್ಟಿರುವುದಾಗಿ ನಕ್ಷೆಯಲ್ಲಿ ತೋರಿಸಲಾಗಿದೆ. ಇನ್ನು ಬಾಡಿಗೆ ಮತ್ತು ನಿರ್ವಹಣೆ ಶುಲ್ಕ ನಿಗದಿಪಡಿಸಬೇಕಿದೆ. ಆ ಕುರಿತು ಮಾಹಿತಿ ನೀಡಲಾಗುವುದು. ಈ ವಿಚಾರವನ್ನೂ ಹೈಕೋರ್ಟ್ ಕಟ್ಟಡ ಸಮಿತಿ ಮುಂದೆ ಇರಿಸಲಾಗಿದೆ.
ಸಮಿತಿಯು ಇಂಧನ ಭವನದಲ್ಲಿ ಗುರುತಿಸಲಾಗಿರುವ ನಿಖರ ಸ್ಥಳದ ಮಾಹಿತಿ ಕೋರಿದೆ. ಇಂಧನ ಇಲಾಖೆಯಿಂದ ಆ ಮಾಹಿತಿ ಪಡೆಯಬೇಕಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ ತಳಮಹಡಿಯಲ್ಲಿರುವ ಕಚೇರಿಗಳನ್ನು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ನೆಲ ಮಹಡಿಗೆ ಸ್ಥಳಾಂತರ ವಿಚಾರದಲ್ಲಿ ಆದ ಬೆಳವಣಿಗೆ ಕುರಿತು ಮಾಹಿತಿ ನೀಡುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್ ಸಿ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠವು 2021ರ ಸೆ.3ರಂದು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿತ್ತು. ಈ ಅರ್ಜಿ ಅ.8ರಂದು ನ್ಯಾಯಪೀಠದ ಮುಂದೆ ಮತ್ತೆ ವಿಚಾರಣೆಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಆಡಳಿತದಲ್ಲಿ ದೇಶ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ