ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕ ಯತೀಂದ್ರ ನೀಡಿದ್ದ 'ಗೂಂಡಾ' ಹೇಳಿಕೆ ಖಂಡಿಸಿ ಬಿಜೆಪಿ ನಾಯಕರಾದ ಎಂ.ರವಿಕುಮಾರ್ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ನಿನ್ನೆ ಚುನಾವಣಾ ಪ್ರಚಾರದ ವೇಳೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒಬ್ಬ ಗೂಂಡಾ, ರೌಡಿ, ಅಂತವರನ್ನು ಪ್ರಧಾನಿ ಮೋದಿ ಅವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಗುಜರಾತ್‌ನಲ್ಲಿ ಅವರ ಮೇಲೆ ಕೊಲೆ ಆರೋಪವಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಅತ್ಯಂತ ಅನುಚಿತ ಪದಗಳನ್ನು ಬಳಸಿದೆ ಎಂದು ದೂರಿ ಚುನಾವಣಾ ಆಯೋಗಕ್ಕೆ ಹಾಗೂ ಪೊಲೀಸರಿಗೆ ಬಿಜೆಪಿ ದೂರು ನೀಡಿದೆ.
ಯತೀಂದ್ರ ಹೇಳಿಕೆ ಬಗ್ಗೆ ಕರ್ನಾಟಕದ ಬಿಜೆಪಿ ನಾಯಕರು ಆಕ್ರೋಶವನ್ನು ವಕ್ತಪಡಿಸಿದರು.
ಬಿಜೆಪಿ ಮುಖಂಡ ಸಿಟಿ ರವಿ ಮಾತನಾಡಿ, 'ಯತೀಂದ್ರ ಅವರು ಅಪ್ಪನ ಹೆಸರಲ್ಲಿ ರಾಜಕೀಯಕ್ಕೆ ಬಂದವರು. ಆದರೆ, ಅಮಿತ್ ಶಾ ಹಾಗಲ್ಲ. ಬೂತ್ ಮಟ್ಟದಲ್ಲಿ ಬೂತ್ ಅಧ್ಯಕ್ಷರಾಗಿ ಕೆಲಸ ಮಾಡಿದರು ಮತ್ತು ನಂತರ ಉನ್ನತ ಸ್ಥಾನಕ್ಕೇರಿದವರು. ತಂದೆಯ ಹೆಸರಿನಲ್ಲಿ ಅವರು ರಾಜಕೀಯಕ್ಕೆ ಬರಲಿಲ್ಲ. ತಂದೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆ ನಡೆದುಕೊಳ್ಳುತ್ತಾರೆ' ಎಂದು ದೂರಿದರು.<>