ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿಕೊಟ್ಟ ಕೋವಿಡ್ ನ ಎರಡು ಮಾದರಿಗಳಲ್ಲಿ ಓಮಿಕ್ರಾನ್ ವೈರಾಣು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ವೇಗದ ಸಮರ್ಥ ಪರೀಕ್ಷೆ ವ್ಯವಸ್ಥೆಯಿಂದಾಗಿ ಬೇಗನೆ ಕೋವಿಡ್ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕರೊಬ್ಬರ ಮಾದರಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇದರಲ್ಲಿ ವೈರಾಣು ಪತ್ತೆಯಾಗಿದೆ. ಅವರು ರಾಜ್ಯಕ್ಕೆ ಬಂದಾಗ ಹೋಟೆಲ್ ನಲ್ಲಿ ತಂಗಿದ್ದರು. ಅವರ ವರದಿ ಪಾಸಿಟಿವ್ ಬಂದಿದ್ದು, ಲಕ್ಷಣ ರಹಿತವಾಗಿತ್ತು. ಮತ್ತೆ ನವೆಂಬರ್ 23 ರಂದು ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಿದ್ದರು. ಅವರ 24 ಪ್ರಾಥಮಿಕ ಹಾಗೂ 240 ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಮಾಡಿ ಪರೀಕ್ಷೆ ಮಾಡಲಾಗಿದೆ. ಆದರೆ ಯಾರೂ ಪಾಸಿಟಿವ್ ಆಗಿಲ್ಲ ಎಂದು ವಿವರಿಸಿದರು.
46 ವರ್ಷದ ವೈದ್ಯರಲ್ಲಿ ಈ ವೈರಾಣು ಕಂಡುಬಂದಿದೆ. ಅವರಿಗೆ ಪಾಸಿಟಿವ್ ಆಗಿದ್ದು, ಅದೇ ದಿನ ಸ್ವಯಂ ಐಸೋಲೇಟ್ ಆಗಿದ್ದಾರೆ. ಅವರಲ್ಲಿ ವೈರಾಣು ಅಧಿಕವಾಗಿದೆ. ಆದರೆ ಇವರಿಗೆ ಯಾವುದೇ ಪ್ರಯಾಣದ ಇತಿಹಾಸ ಇಲ್ಲ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಿದ್ದು, 5 ಮಂದಿಯ ಪಾಸಿಟಿವ್ ವರದಿ ಬಂದಿದೆ. ಒಟ್ಟು ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೇಲೆ ನಿರಂತರ ನಿಗಾ ಇರಿಸಿದ್ದು, ಯಾರಿಗೂ ಹೆಚ್ಚು ಸಮಸ್ಯೆಯಾಗಿಲ್ಲ ಎಂದು.
ಜನರು ತಪ್ಪದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಯಾರೂ ಆತಂಕಕ್ಕೆ ಒಳಗಾಗಬಾರದು. ಮುಖ್ಯಮಂತ್ರಿಗಳು ದೆಹಲಿಯಿಂದ ಬಂದ ಕೂಡಲೇ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ವೈರಾಣ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು. ಆದರೆ ಯಾರೂ ಊಹಾಪೋಹಗಳನ್ನು ಹರಡಬಾರದು ಎಂದು ಕೋರಿದರು.