ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಗೆ ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಆದರೆ ಡಿಕೆಶಿ ಕೈಗೆ ಸಿಗದೇ ಹೈಕಮಾಂಡ್ ನಾಯಕರು ತಪ್ಪಿಸಿಕೊಳ್ಳುತ್ತಿದ್ದಾರಾ ಎಂದು ಅನುಮಾನ ಮೂಡುತ್ತಿದೆ.
ದೆಹಲಿಗೆ ಹೋಗಿರುವ ಡಿಕೆ ಶಿವಕುಮಾರ್ ಸಾಧ್ಯವಾದರೆ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಮುಂತಾದ ನಾಯಕರನ್ನು ಭೇಟಿ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಇಬ್ಬರೂ ನಾಯಕರು ಡಿಕೆಶಿಗೆ ಸಿಕ್ಕಿಲ್ಲ.
ಸದ್ಯಕ್ಕೆ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಅದರ ಬಳಿಕವೇ ಕರ್ನಾಟಕದ ಬಗ್ಗೆ ತೀರ್ಮಾನ ತೆಗೆದುಕೊಳ್ಳೋಣ ಎಂಬ ನಿಲುವು ಹೈಕಮಾಂಡ್ ನಾಯಕರಲ್ಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅದಕ್ಕಿಂತ ಮೊದಲು ಈ ವಿಚಾರವಾಗಿ ಕರ್ನಾಟಕದ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸದೇ ಮೌನಕ್ಕೆ ಶರಣಾಗುವ ತಂತ್ರ ಹೆಣೆದಿದ್ದಾರೆ.
ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಸಿಎಂ ಹೇಳಿದ ಮೇಲೆ ಮುಗಿಯಿತು. ಅವರು ಹೇಗೆ ಹೇಳುತ್ತಾರೋ ಹಾಗೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ. ಆದರೂ ಡಿಕೆಶಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.