ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆ ಭಾರೀ ಕುತೂಹಲವನ್ನು ಮೂಡಿಸಿದೆ.
ಸದ್ಯ ನಾಯಕತ್ವ ಬದಲಾವಣೆ ಬಗ್ಗೆ ಭಾರೀ ಚರ್ಚೆಗಳಾಗುತ್ತಿದ್ದು, ಇದಕ್ಕೆಲ್ಲ ಹೈಕಮಾಂಡ್ ಸ್ಪಷ್ಟನೆ ನೀಡಬೇಕಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಗಟ್ಟಿಯಾಗಿರುವುದರಿಂದ ಈಗ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧನಾಗುವ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ ಸಿದ್ದರಾಮಯ್ಯವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ, ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಈಗ ನಮಗೆ ನಾಯಕತ್ವ ಬದಲಾವಣೆಯ ಸನ್ನಿವೇಶ ಕಾಣುತ್ತಿಲ್ಲ ಎಂದು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆಯಾಗಲಿ, ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲಿ ಹೇಳಿಲ್ಲ. 2028ರ ಚುನಾವಣೆಯ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡೋಣ. ಪಕ್ಷದ ಹೈಕಮಾಂಡ್ ಯಾರನ್ನು ಏನು ಮಾಡಬೇಕು ಎಂದು ನಿರ್ಧರ ಮಾಡುತ್ತದೆ ಎಂದರು.