Publish Date: Wed, 27 Apr 2022 (09:52 IST)
Updated Date: Wed, 27 Apr 2022 (09:54 IST)
ಹಳಿಯಾಳ : ಹಣದ ಆಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶು ಮಾರಾಟ ಮಾಡಿದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಸಂಜೆ ವರದಿಯಾಗಿದೆ.
ತಟ್ಟಿಗೇರಿ ಗ್ರಾಪಂನ ಗೌಳಿವಾಡದ ಸಂತ್ರಸ್ತೆ ಸಾವಿತ್ರಿ 6 ದಿನದ ಹಿಂದೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಹಣದಾಸೆಗಾಗಿ ಅವಳ ಸ್ವಂತ ಸಹೋದರ ಭಯ್ಯಾ ಪಟಕಾರೆ (30), ಆಶಾ ಕಾರ್ಯಕರ್ತೆ ರೋಜಿ ದಬಾಲಿ (35), ಅಗಸಲಕಟ್ಟಾಗ್ರಾಮದ ಮಮತಾಜ ಹಳಬ (30) ಅವರು ಸೇರಿ ತಾಯಿಯನ್ನು ಪುಸಲಾಯಿಸಿ ಮಗುವನ್ನು ಕೇವಲ .25 ಸಾವಿರಕ್ಕೆ ಯಲ್ಲಾಪೂರ ತಾಲೂಕಿನ ಕಿರವತ್ತಿಯ ದಂಪತಿ ಅಬ್ದುಲ್ ರೆಹಮಾನ್ ಪಟೇಲ್, ರಾಹತ್ ಪಟೇಲ್ (38) ದಂಪತಿಗಳಿಗೆ ಮಾರಾಟ ಮಾಡಿದ್ದರು.
ಈ ಕುರಿತು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಡಿಪಿಒ ಡಾ. ಲಕ್ಷ್ಮಿದೇವಿ ಅವರು, ಪಿಎಸ್ಐ ಶಿವಾನಂದ ನಾವದಗಿ, ಪಿಡಿಒ ಮಹಾಂತೇಶ ಹುರಕಡ್ಲಿ, ವಲಯ ಮೇಲ್ವಿಚಾರಕಿ ರಾಜೇಶ್ವರಿ ಕಟ್ಟಿಮನಿ, ಪೊಲೀಸ್ ಕಾನ್ಸ್ಟೇಬಲ್ ರಮ್ಯಾ ಅವರ ಜೊತೆ ಸೋಮವಾರ ಸಂಜೆ ಅರಣ್ಯದ ಅಂಚಿನಲ್ಲಿರುವ ತಟ್ಟಿಗೇರಿ ಗೌಳಿವಾಡಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಪರಿಶೀಲಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮಂಗಳವಾರ ಯಲ್ಲಾಪೂರದ ಕಿರವತ್ತಿಯ ದಂಪತಿ ಮನೆಗೆ ತೆರಳಿ ಶಿಶುವನ್ನು ರಕ್ಷಿಸಿದ್ದಾರೆ. ಬಳಿಕ ಶಿರಸಿಯ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದರು. ಈ ಬಗ್ಗೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.