ಬೆಂಗಳೂರು: ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿದ ಘಟನೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರವೇ ಹೆಣ್ಣಾ ಎಂದು ಕಿಡಿ ಕಾರಿದ್ದಾರೆ.
ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಆವಾಝ್ ಹಾಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಹಿಳಾ ಅಧಿಕಾರಿ ಕೂಡಾ ಒಬ್ಬ ಸರ್ಕಾರೀ ಅಧಿಕಾರಿ ಜೊತೆ ಇಷ್ಟು ಕೀಳಾಗಿ ಮಾತನಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದರು.
ಈ ಘಟನೆ ಈಗ ಭಾರೀ ವಿವಾದಕ್ಕೀಡಾಗಿದೆ. ಶಾಸಕ ಸಂಗಮೇಶ್ ಪುತ್ರನ ವರ್ತನೆ ಬಗ್ಗೆ ವಿಪಕ್ಷ ಬಿಜೆಪಿ ಮತ್ತು ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಿಟಿ ರವಿ ಸದನದಲ್ಲಿ ಅಶ್ಲೀಲ ಪದ ಬಳಸಿದರು ಎಂಬುದನ್ನು ದೊಡ್ಡ ವಿವಾದ ಮಾಡಿದ್ದಿರಿ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಹೆಣ್ಣು ಅವರ ಬಗ್ಗೆ ಕೀಳು ಕಾಮೆಂಟ್ ಮಾಡಿದ್ದಾರೆ ಎಂದು ಸಿಟಿ ರವಿ ಮೇಲೆ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದರು. ಇದೀಗ ಸಂಗಮೇಶ್ ಪುತ್ರ ಆವಾಜ್ ಹಾಕಿರುವ ಅಧಿಕಾರಿ ಕೂಡಾ ಮಹಿಳೆ ಅಲ್ವಾ? ಅವರಿಗೆ ಯಾಕೆ ಈ ನಿಯಮ ಅನ್ವಯವಾಗಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಿಕೆ ಸಂಗಮೇಶ್, ಇದು ಬಿಜೆಪಿ ಮತ್ತು ಜೆಡಿಎಸ್ ನವರ ಕುತಂತ್ರ. ವಿಡಿಯೋದಲ್ಲಿರುವ ಧ್ವನಿ ನನ್ನ ಪುತ್ರನದ್ದೇ ಅಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.