Select Your Language

Notifications

webdunia
webdunia
webdunia
webdunia

ಕಟ್ಟು ನಿಟ್ಟಾಗಿ ಶಿಕ್ಷಕರ ನೇಮಕ ಪರೀಕ್ಷೆ ನಡೆಸಲು ಇಲಾಖೆಯಿಂದ ಅಗತ್ಯ ಕ್ರಮ

ಕಟ್ಟು ನಿಟ್ಟಾಗಿ ಶಿಕ್ಷಕರ ನೇಮಕ ಪರೀಕ್ಷೆ ನಡೆಸಲು ಇಲಾಖೆಯಿಂದ ಅಗತ್ಯ ಕ್ರಮ
bangalore , ಮಂಗಳವಾರ, 10 ಮೇ 2022 (20:38 IST)
ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) 15,000 ಹುದ್ದೆಗಳಿಗೆ ಮೇ 21 ಮತ್ತು 22ರಂದು ನಡೆಯುವ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಕಟ್ಟು ನಿಟ್ಟಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು. 
 
‘ಮಂಗಳವಾರ (ಮೇ 10) ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಸಮಾಜ ವಿಜ್ಞಾನ, ಗಣಿತ, ಇಂಗ್ಲೀಷ್ ಮತ್ತು ಜೀವ ವಿಜ್ಞಾನ ಶಿಕ್ಷಕರ 15 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 1.06 ಲಕ್ಷ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಒಟ್ಟು 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಯಾವುದೇ ಲೋಪ-ದೋಷಗಳು ಉಂಟಾಗದಂತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇನ್ನಿತರ ಇಲಾಖೆಗಳ ಅಧಿಕಾರಿಗಳ ಜೊತೆ ವಿವಿಧ ಹಂತಗಳಲ್ಲಿ ಸಭೆ ನಡೆಸಲಾಗಿದೆ. ಮಂಗಳವಾರದಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಯು ಸಭೆ ನಡೆಸಿ ಚರ್ಚಿಸಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
 
‘ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಂದು ತಾಸು ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಭ್ಯರ್ಥಿಗಳನ್ನು ಎರಡು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಒಂದು ಹಂತದಲ್ಲಿ ಪೊಲೀಸರು ಹಾಗೂ ಮತ್ತೊಂದು ಹಂತದಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಮೊಬೈಲ್ ಫೋನ್, ಬ್ಲೂಟೂತ್, ಕೈ ಗಡಿಯಾರ, ಸ್ಮಾರ್ಟ್ ವಾಚ್, ಸ್ಮಾರ್ಟ್ ಬ್ಯಾಂಡ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಅಭ್ಯರ್ಥಿಗಳು ಸಮಯವನ್ನು ನೋಡಿಕೊಳ್ಳಲು ಎಲ್ಲ ಕೊಠಡಿಗಳಲ್ಲಿ ‘ಗೋಡೆ ಗಡಿಯಾರ’ ಹಾಕಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
 
‘ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ 20 ಅಭ್ಯರ್ಥಿಗಳಿರುತ್ತಾರೆ. ಅಭ್ಯರ್ಥಿಗಳು ಯಾವುದೇ ಊಹ-ಪೋಹಗಳಿಗೆ ಕಿವಿಗೊಡದೆ ನೆಮ್ಮದಿಯಿಂದ ಪರೀಕ್ಷೆ ಬರೆಯಬೇಕು’ ಎಂದು ಸಚಿವರು ಹೇಳಿದರು.
 
‘ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆಗಳನ್ನು ಪ್ರವೇಶಪತ್ರದಲ್ಲಿ ತಿಳಿಸಲಾಗುತ್ತದೆ. ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಇನ್ನಿತರ ನಿಷೇಧಿತ ವಸ್ತು, ಸಾಧನಗಳನ್ನು ಅಭ್ಯರ್ಥಿಗಳು ಹೊಂದಿಲ್ಲ ಎಂಬುದನ್ನು ಪತ್ತೆ ಮಾಡಲು ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೆಟಿಲ್ ಡಿಟೆಕ್ಟರ್ ಬಳಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
‘ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ತಹಸೀಲ್ದಾರ್ ಮೇಲ್ಪಟ್ಟು ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು. 
 
‘ಪರೀಕ್ಷಾ ಕೇಂದ್ರದ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ವಿಚಕ್ಷಣಾ ದಳಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಅಧಿಕಾರಿಗಳ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ಜೊತೆ ಇತ್ತೀಚೆಗೆ ನಡೆದ ಸಭೆಯಲ್ಲೂ ಶಿಕ್ಷಕರ ನೇಮಕ ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ, ಲೋಪ-ದೋಷಗಳು ಆಗದಂತೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಂಡಮಾರುತದ ಎಫೆಕ್ಟ್; ರಾಜ್ಯಾದೆಂತ ಭಾರಿ ಮಳೆ ನಿರೀಕ್ಷೆ, ಯೆಲ್ಲೋ ಅಲರ್ಟ್