ಬೆಂಗಳೂರು: ನಾಳೆ (ಜೂನ್ 22) ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ (ಪ್ಯಾಲೇಸ್ ಗ್ರೌಂಡ್) ರಾಜ್ಯದ 19 ಜನ ಎನ್‍ಡಿಎ ಸಂಸದರ ಸನ್ಮಾನ, ರಾಜ್ಯದ ಕೇಂದ್ರ ಸಚಿವರ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಿಂದ ದೆಹಲಿಗೆ ಹೋಗಿ ದೇಶ- ರಾಜ್ಯದ ಸೇವೆ ಮಾಡುತ್ತಿರುವ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೇಂದ್ರದ ಸಚಿವರನ್ನೂ ಅಭಿನಂದಿಸಲಾಗುವುದು ಎಂದು ಅವರು ವಿವರ ನೀಡಿದರು.
ಈ ಕಾರ್ಯಕ್ರಮದಲ್ಲಿ ನಮ್ಮೆಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ ಉತ್ತರ ಕೊಟ್ಟ ಅವರು, ಡಿ.ಕೆ.ಶಿವಕುಮಾರ್ ಅವರು ಅವರ ಪಕ್ಷದಿಂದ ಶಾಸಕರಾಗಿದ್ದರೂ ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಆದರೆ, ಜನರ ಮನದಾಳದಲ್ಲಿ ಏನಿದೆ ಎಂಬುದು ನಿಗೂಢವಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಲು ಅಸಾಧ್ಯ ಎಂದು ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಅಂದುಕೊಂಡಿದ್ದರು. ಆದರೆ, ಮತದಾರರ ತೀರ್ಪನ್ನು ತಾವೆಲ್ಲರೂ ನೋಡಿದ್ದೀರಿ ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗಿ ಕುಮಾರಸ್ವಾಮಿಯವರು ಅಭಿವೃದ್ಧಿ ಮಾಡಿದ್ದಾರೆ ಹಾಗೂ ಸೇವೆ ಮಾಡಿದ್ದಾರೆ. ಅವರು ಸಂಸದರಾಗಿ ದೆಹಲಿಗೆ ಹೋದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ನಮ್ಮ ಅಭ್ಯರ್ಥಿ ಯಾರೆಂಬ ಬಗ್ಗೆ ನಾವು ಮತ್ತು ಜೆಡಿಎಸ್ ಪಕ್ಷದವರು ಜೊತೆಗೂಡಿ ಚರ್ಚಿಸಿ ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು.