ಮೈಸೂರು : ಬಿಜೆಪಿ ನಂದಿನಿ ಮುಗಿಸಲು ಗುಜರಾತಿಯ ಅಮುಲ್ ತರಲು ಹೊರಟಿದ್ದಾರೆ. ಆದರೆ ನಂದಿನಿ ಸಂಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಬಂದರೆ ಗಟ್ಟಿಗೊಳ್ಳಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಂದಿನಿಯ ಬ್ರಾಂಡ್ ಅನ್ನು ಒಡೆದು ಹಾಕುವ ಸಂಚು ನಡೆಯುತ್ತಿದೆ. ಮೊದಲು 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ ಅದು 70 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಉದ್ದೇಶ ಪೂರ್ವಕವಾಗಿ ಹಾಲು ಉತ್ಪಾದನೆ ಕಡಿಮೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುವ ಹಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಇಲ್ಲಿ ಪದೇ ಪದೇ ಸಿಎಂಗಳು ಬದಲಾದರು. ದುರ್ಬಲ ಸಿಎಂ ಈ ರಾಜ್ಯಕ್ಕೆ ಸಿಕ್ಕಿರುವುದರ ಪರಿಣಾಮವಾಗಿದೆ. ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆ ಆಗಲಿಲ್ಲ. ಈ ಸರ್ಕಾರ 40% ಹೆಸರಿನಲ್ಲಿ ಈ ರಾಜ್ಯವನ್ನು ಲೂಟಿ ಮಾಡಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು.
ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಪ್ರಯೋಜನ ಆಗಲಿಲ್ಲ. ಎಲ್ಲಾ ಸರ್ಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯಿತು. ಕೋವಿಡ್ ರೋಗಿಗಳನ್ನು ಬಿಡಲಿಲ್ಲ. ಮಕ್ಕಳ ಮೊಟ್ಟೆಯಲ್ಲೂ ಬಿಡಲಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರ. ಒಂದುವರೆ ಲಕ್ಷ ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.