ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ಆತಂಕದಲ್ಲಿದ್ದ ಸಾರ್ವಜನಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೊನೆಗೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದಂತಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿತ್ತು. ಅದರ ಬೆನ್ನಲ್ಲೇ ಬೆಂಗಳೂರಿಗರಿಗೆ ಮೆಟ್ರೋ ಪ್ರಯಾಣ ದರವೂ ಏರಿಕೆಯಾಗಲಿದೆ ಎಂಬ ಸುದ್ದಿ ಆತಂಕ ತಂದಿತ್ತು.
ಈ ಬಗ್ಗೆ ಬಿಎಂಆರ್ ಸಿಎಲ್ ಪ್ರಸ್ತಾವನೆ ಸಲ್ಲಿಸಿತ್ತು. ಅಂದಾಜು ಶೇ.40 ರಷ್ಟು ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ಸುದ್ದಿ ಬಂದಿತ್ತು. ಆದರೆ ಈಗ ಆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿಲ್ಲ. ಹೀಗಾಗಿ ಸದ್ಯಕ್ಕೆ ಮೆಟ್ರೋ ಟಿಕೆಟ್ ದರ ಏರಿಕೆಯಾಗದು ಎಂದು ತಿಳಿದುಬಂದಿದೆ.
ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ವರದಿ ಕೇಳಿದೆ. ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರವನ್ನೂ ಏರಿಕೆ ಮಾಡಿದರೆ ಜನರಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಪ್ರಸ್ತಾವನೆಯನ್ನು ತಳ್ಳಿ ಹಾಕಿದೆ ಎನ್ನಲಾಗಿದೆ. ಇದರಿಂದ ಜನ ನಿಜವಾಗಿಯೂ ನಿಟ್ಟುಸಿರುವ ಬಿಡುವಂತಾಗಿದೆ.