Publish Date: Tue, 28 Jan 2025 (08:41 IST)
Updated Date: Tue, 28 Jan 2025 (08:43 IST)
ಬೆಂಗಳೂರು: ಕರ್ನಾಟಕದ ಹವಾಮಾನ ಇದೀಗ ದಿನ ದಿನಕ್ಕೂ ವ್ಯತ್ಯಾಸವಾಗುತ್ತಿದ್ದು ಇಂದಿನಿಂದ ವಾತಾವರಣದಲ್ಲಿ ಈ ಸಣ್ಣ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.
ರಾಜ್ಯದಲ್ಲಿ ಕಳೆದ ವಾರವಿಡೀ ವಿಪರೀತ ಚಳಿಯ ವಾತಾವರಣವಿತ್ತು. ಉತ್ತರ ಒಳನಾಡಿನಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಆದರೆ ಈ ವಾರಂತ್ಯದಲ್ಲಿ ವಾತಾವರಣದಲ್ಲಿ ಸಣ್ಣ ಬದಲಾವಣೆಯನ್ನು ಗಮನಿಸಬಹುದಾಗಿದೆ.
ಇಂದಿನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಸಣ್ಣ ಮಟ್ಟಿಗೆ ಏರಿಕೆ ಕಂಡುಬರಲಿದೆ. ಇದುವರೆಗೆ 16 ಡಿಗ್ರಿಯವರೆಗೆ ಕನಿಷ್ಠ ತಾಪಮಾನವಿತ್ತು. ಆದರೆ ಇಂದಿನಿಂದ ನಿಧಾನವಾಗಿ ತಾಪಮಾನದಲ್ಲಿ ಒಂದು ಎರಡು ಡಿಗ್ರಿ ಸೆಲ್ಶಿಯಸ್ ನಷ್ಟು ವ್ಯತ್ಯಾಸ ಕಂಡುಬರಲಿದೆ.
ಗರಿಷ್ಠ ತಾಪಮಾನ 28 ಡಿಗ್ರಿಯವರೆಗೆ ತಲುಪಲಿದ್ದು, ಕನಿಷ್ಠ ತಾಪಮಾನ 18 ರಿಂದ 19 ಡಿಗ್ರಿಯವರೆಗೆ ಏರಿಕೆಯಾಗಲಿದೆ. ಹೀಗಾಗಿ ಚಳಿಯ ಪ್ರಮಾಣ ಕೊಂಚ ಇಳಿಕೆಯಾಗಲಿದೆ ಎನ್ನಬಹುದು. ಉಳಿದಂತೆ ವಾರಂತ್ಯಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಣ್ಣ ಮಳೆಯಾದರೂ ಅಚ್ಚರಿಯಿಲ್ಲ.