Publish Date: Wed, 22 Apr 2026 (10:47 IST)
Updated Date: Wed, 22 Apr 2026 (10:50 IST)
ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕನಿಗೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಉಗ್ರವಾಗಿ ಖಂಡಿಸುತ್ತದೆ. ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಇಡೀ ಪಕ್ಷಕ್ಕೆ ಹಾಗೂ ದೇಶದ 140 ಕೋಟಿ ಜನಕ್ಕೆ ಅಪಮಾನ ಮಾಡಿದ್ದಾರೆ ಎಂದರು.
ಮೋದಿ ಅವರು ಭಯೋತ್ಪಾದಕ ಆಗಿದ್ದರೆ ಇಷ್ಟೊಂದು ಜನ ಬಿಜೆಪಿಗೆ ಮತ ಹಾಕುತ್ತಿರಲಿಲ್ಲ. ಎನ್‍ಡಿಎ ಬೆಂಬಲಿಸುತ್ತಿರಲಿಲ್ಲ. ನಿರಂತರವಾಗಿ ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರಲಿಲ್ಲ. ಮೋದಿ ಅವರ ಜನಪ್ರಿಯತೆಗೆ ಅವರು ಇಡೀ ದೇಶದಲ್ಲಿ ಎಲ್ಲೇ ಚುನಾವಣೆ ಆದರೆ ಅವರು ಬಂದರೆ ಜನರು ಸೇರುವುದೇ ಸಾಕ್ಷಿ. ಮಲ್ಲಿಕಾರ್ಜುನ ಖರ್ಗೆ ಅವರು ದೇಶ ಕೋಟ್ಯಂತರ ಜನರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರನ್ನು ಕಾಂಗ್ರೆಸ್ ಪಕ್ಷ ಅಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.
ಪ್ರಪಂಚದಲ್ಲಿನ ಅಭಿವೃದ್ಧಿಶೀಲ ದೇಶಗಳೂ ಕೂಡ ನರೇಂದ್ರ ಮೋದಿ ಅವರಂತಹವರ ನಾಯಕತ್ವ ನಮ್ಮ ದೇಶಕ್ಕೂ ಬೇಕು ಎಂದು ಬಯಸಿದ್ದಾರೆ. ಆದರೆ ಇದೆಲ್ಲದರ ಅರಿವು ಇಲ್ಲದ ಖರ್ಗೆ ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದರು. ಖರ್ಗೆ ಅವರು ಮೋದಿ ವಿರುದ್ಧ ಮಾತನಾಡಿದ್ದು ಇದೇ ಮೊದಲಲ್ಲ. ಗುಜರಾಜ್ ಚುನಾವಣೆ ವೇಳೆ ಹತ್ತು ತಲೆಯ ರಾವಣನಿಗೆ ಮೋದಿಯವರನ್ನು ಖರ್ಗೆ ಹೋಲಿಸಿದ್ದರು. ಅಷ್ಟೇ ಅಲ್ಲ ಕರ್ನಾಟಕ ಚುನಾವಣೆ ವೇಳೆ ಕಲಬುರಗಿಯಲ್ಲಿ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದ್ದರು. ಮತ್ತೊಂದು ಬಾರಿ ಮೋದಿ ಅವರು ಆಯ್ಕೆಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಸಂಸತ್ ಒಳಗೆ ಮಾತನಾಡುವಾಗ ಹೇಳಿದ್ದರು ಎಂದು ನೆನಪಿಸಿದರು.
ಮೋದಿ ಅವರ ಬಗ್ಗೆ ಲವಲೇಶವೂ ಗೌರವ ಇಲ್ಲದೇ ಖರ್ಗೆ ಅವರು ಮಾತನಾಡುತ್ತಾರೆ. ಆದರೆ ಕೋಟ್ಯಂತರ ಜನರು ಚುನಾವಣೆ ಮೂಲಕ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ಸೋಲುತ್ತಾ ಪ್ರಪಾತಕ್ಕೆ ಬೀಳುತ್ತಿರುವಾಗ ಭ್ರಮನಿರಸನಗೊಂಡು ಮಾತನಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದರು
ಕಾಂಗ್ರೆಸ್‍ಗೆ ಸ್ವಲ್ಪವಾದರೂ ಗೌರವ ಇದ್ದರೆ ಖರ್ಗೆ ಅವರನ್ನು ಹುದ್ದೆಯಿಂದ ಇಳಿಸಬೇಕು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಖರ್ಗೆ ಹೇಳಿಕೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ