Publish Date: Thu, 26 Jun 2025 (15:04 IST)
Updated Date: Thu, 26 Jun 2025 (15:07 IST)
ಮೈಸೂರು: ಆಷಾಢ ಶುಕ್ರವಾರ ಹಿನ್ನಲೆಯಲ್ಲಿ ನಾಳೆಯಿಂದ ಚಾಮುಂಡಿ ಬೆಟ್ಟಕ್ಕೆ ಅಮ್ಮನವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ನಾಡದೇವತೆಯ ದರ್ಶನಕ್ಕೆ ಬರುವ ವಿಐಪಿಗಳಿಗೂ ಈಗ ಜಿಲ್ಲಾಡಳಿತ ಖಡಕ್ ರೂಲ್ಸ್ ಜಾರಿಗೊಳಿಸಿದೆ.
ಇಷ್ಟು ದಿನ ಆಷಾಢ ಪೂಜೆಗೆಂದು ಅಮ್ಮನವರ ದರ್ಶನಕ್ಕೆ ಬಂದರೆ ಸಾಮಾನ್ಯ ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಕಾಲು ನೋಯಿಸಿಕೊಂಡು ಕೊನೆಗೆ ಅರೆಕ್ಷಣ ದೇವಿಯ ದರ್ಶನ ಪಡೆಯುವಷ್ಟರಲ್ಲಿ ತಳ್ಳಿ ಬಿಡುತ್ತಿದ್ದರು. ಆದರೆ ವಿಐಪಿಗಳೆನಿಸಿಕೊಂಡವರು ಮಾತ್ರ ಜಮ್ ಅಂತ ಕಾರಿನಲ್ಲಿ ಬಂದು ಸೀದಾ ಒಳಗೆ ಹೋಗಿ ದೇವಿಯ ಮುಂದೆಯೇ ಸಾವಕಾಶವಾಗಿ ನಿಂತು ಪ್ರಾರ್ಥನೆ ಮಾಡಿಕೊಂಡು ತೆರಳುತ್ತಿದ್ದರು.
ವಿಐಪಿಗಳು ಬಂದಾಗ ಕೆಲವು ಹೊತ್ತು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅಡೆತಡೆಯಾಗುತ್ತಿತ್ತು. ಇದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಈ ಬಾರಿ ಈ ರೀತಿ ಸಮಸ್ಯೆಯಾಗದಿರಲು ಜಿಲ್ಲಾಡಳಿತ ನಿಯಮ ರೂಪಿಸಿದೆ.
ವಿಐಪಿಗಳು ಇನ್ನು ಮುಂದೆ ಯಾವಾಗಲೆಂದರೆ ಆಗ ಬಂದು ದೇವಿಯ ದರ್ಶನ ಪಡೆಯಲು ಬರುವಂತಿಲ್ಲ. ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯೊಳಗೆ ಬಂದರೆ ಮಾತ್ರ ವಿಐಪಿಗಳಿಗೆ ಸೀದಾ ಹೋಗಿ ದೇವಿಯ ದರ್ಶನ ಪಡೆದು ಬರಬಹುದು. ಉಳಿದ ಸಮಯದಲ್ಲಿ ಬಂದರೆ ವಿಐಪಿ ದರ್ಶನ ಸಿಗಲ್ಲ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ವಿಐಪಿ ದರ್ಶನಕ್ಕೆ ಈ ಬಾರಿ ಸಮಯ ನಿಗದಿಪಡಿಸಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಇದಕ್ಕೆ ಸಾರ್ವಜನಿಕರಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.