ಮೈಸೂರು: ಬೀದರ್, ಮಂಗಳೂರು ದರೋಡೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಮೈಸೂರಿನಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಕಾರಿನಿಂದ ಉದ್ಯಮಿಯೊಬ್ಬರನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಹಾರೋಹಳ್ಳಿ ಬಳಿ ಘಟನೆ ನಡೆದಿದೆ. ಹಾಡಹಗಲೇ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಕೇರಳ ಮೂಲದ ಉದ್ಯಮಿಯೊಬ್ಬರಿಂದ ನಗ-ನಗದು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮುಖ ಮುಚ್ಚುವಂತೆ ಟೋಪಿ ಹಾಕಿಕೊಂಡು ಬಂದಿದ್ದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಬಾಗಿಲನ್ನು ಬಲವಂತವಾಗಿ ತೆಗೆಸಿ ಕೈಗೆ ಸಿಕ್ಕಿದ್ದುನ್ನು ಎಳೆದಾಡಿದ್ದಾರೆ. ವಿಶೇಷವೆಂದರೆ ಇಲ್ಲಿ ಬೇರೆ ವಾಹನಗಳು ಇದ್ದರೂ ಏನೂ ಮಾಡಲಾಗದ ಅಸಹಾಯಕತೆ ಎದುರಾಗಿದೆ. ಜನ ಕಿರುಚಾಡಿದರೂ ಯಾರೂ ಸಹಾಯಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ.
ಹಣ ಕಳೆದುಕೊಂಡ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ. ಜೊತೆಗೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸಾಕಷ್ಟು ಜನರ ನಡುವೆಯೇ ಈ ರೀತಿ ದರೋಡೆಕೋರರು ಸ್ವಲ್ಪವೂ ಭಯವಿಲ್ಲದೇ ದರೋಡೆ ನಡೆಸಿರುವುದು ನಿಜಕ್ಕೂ ಆತಂಕಕಾರೀ ವಿಚಾರವಾಗಿದೆ.