Publish Date: Mon, 30 Sep 2024 (15:51 IST)
Updated Date: Mon, 30 Sep 2024 (16:10 IST)
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್‌ಗೆ ಜಾಮೀನು ಮಂಜೂರಾಗಿ 5 ದಿನ ಕಳೆದರೂ ಇನ್ನೂ ಜೈಲಿನಿಂದ ಬಿಡುಗಡೆಯಾಗಿಲ್ಲ. ಬಡವರಾಗಿರುವ ಕಾರ್ತಿಕ್ ಕುಟುಂಬ ಇದೀಗ ಸಹಾಯ ಕೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಬಡವರು. ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲು ಸಾಧ್ಯವಾಗದ ಕಾರಣ ನಮ್ಮ ಮಗನನ್ನ ಹೇಗೆ ಕರೆತರೋದು ಎಂದು ಗೊತ್ತಾಗುತ್ತಿಲ್ಲ. ದುಡಿಯುವ ಮಗನನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲ. ಜಾಮೀನು ಸಿಕ್ಕಿ 5 ದಿನವಾದರೂ ಬಿಡುಗಡೆಯಾಗಲಿಲ್ಲ. ದಯವಿಟ್ಟು ನಮಗೆ ಯಾರಾದರೂ ಸಹಾಯ ಮಾಡಿ ಎಂದಿದ್ದಾರೆ.
ಶ್ಯೂರಿಟಿ ನೀಡಲು ನಮಗೆ ಶಕ್ತಿ ಇಲ್ಲ. ಆಕ್ಸಿಡೆಂಟ್ ಆಗಿ ಕಾಲು ಮುರಿದಿತ್ತು. ಆಗ ನನಗೆ ಎಂದು ನಾಲ್ಕೈದು ಲಕ್ಷ ಸಾಲ ಮಾಡಿದ್ದ. ಅದನ್ನ ತೀರಿಸುವ ಸಲುವಾಗಿ ಅವರ ಜತೆ ಹೋಗಿದ್ದಾನೆ. ನನ್ನ ಮಗ ಇಂತಹ ಕೆಲಸ ಮಾಡುವವನಲ್ಲ ಎಂದರು. ದರ್ಶನ್ ಕುಟುಂಬ ನಮಗೆ ಪರಿಚಯವಿಲ್ಲ. ದರ್ಶನ್ ಫ್ಯಾನ್ಸ್ ಕೂಡಾ ನಮ್ಮನ್ನು ಸಂಪರ್ಕಿಸಿಲ್ಲ. ಯಾರಾದರೂ ನಮ್ಮ ಮಗನನ್ನು ಬಿಡುಗಡೆ ಮಾಡಲು ಸಹಾಯ ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ.