Publish Date: Thu, 25 Jun 2026 (09:59 IST)
Updated Date: Thu, 25 Jun 2026 (10:05 IST)
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣವಾದ ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ನಡೆದ ಈ ಭೀಕರ ದುರಂತ ಇಡೀ ರಾಜ್ಯವನ್ನೇ ಕಂಗೆಡಿಸಿದೆ. ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ನಾಲ್ವರು ನೀರಿನಲ್ಲಿ ಆಟವಾಡುತ್ತಿದ್ದ ವಿಡಿಯೋ ಈಗ ವೈರಲ್ ಆಗಿದೆ.
ಚನ್ನಪಟ್ಟಣ ತಾಲ್ಲೂಕಿನ ಬ್ಯಾಡರಹಳ್ಳಿ ಮೂಲದ ಒಂದೇ ಕುಟುಂಬದ ನಾಲ್ಕು ಮಹಿಳೆಯರು ಹಾಗೂ ಅವರ ಕಾರು ಚಾಲಕ ನದಿಯ ಭಾರಿ ಹರಿವಿಗೆ ಸಿಲುಕಿ ಜಲಸಮಾಧಿಯಾಗಿರುವುದು ಅತ್ಯಂತ ಹೃದಯವಿದ್ರಾವಕ ಸಂಗತಿಯಾಗಿದೆ.
ವಿಜಯಮ್ಮ (50 ವರ್ಷ) ಶ್ವೇತಾ (38 ವರ್ಷ) ಪ್ರಿಯಾಂಕಾ (28 ವರ್ಷ) ಚೈತ್ರಾ (20 ವರ್ಷ) ಮಹೇಶ್ (ಕಾರು ಚಾಲಕ, 30 ವರ್ಷ) ಮೃತರಾದವರೆಲ್ಲರೂ ಬೆಂಗಳೂರಿನಿಂದ ಕಾರು ಬಾಡಿಗೆಗೆ ಪಡೆದುಕೊಂಡು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಬೀಗರ ಊಟ ಮುಗಿಸಿ, ನಂತರ ಮುತ್ತತ್ತಿಯ ಶ್ರೀ ಮುತ್ತೆತ್ತರಾಯ (ಆಂಜನೇಯಸ್ವಾಮಿ) ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿದ ಬಳಿಕ, ಸಂಜೆ 5 ರಿಂದ 6 ಗಂಟೆಯ ಸುಮಾರಿಗೆ ನದಿಯ ದಂಡೆಯ ಬಳಿ ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ನದಿಗೆ ಇಳಿದಿದ್ದಾರೆ. ನದಿಯ ಆಳದ ಅರಿವಿಲ್ಲದೆ ಮೊದಲು ವಿಜಯಮ್ಮ ಅವರು ನೀರಿನಲ್ಲಿ ಸಮತೋಲನ ಕಳೆದುಕೊಂಡು ಮುಳುಗಲಾರಂಭಿಸಿದರು. ಈ ವಿಡಿಯೋದಲ್ಲಿ ಈ ಮಹಿಳೆಯರು ನದಿ ನೀರಿನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಕಾಣಬಹುದಾಗಿದೆ.
ವಿಜಯಮ್ಮ ಅವರನ್ನು ರಕ್ಷಿಸಲು ಹೋದ ಶ್ವೇತಾ, ಪ್ರಿಯಾಂಕಾ ಮತ್ತು ಚೈತ್ರಾ ಒಬ್ಬರನ್ನೊಬ್ಬರು ಹಿಡಿಯಲು ಹೋಗಿ ನೀರಿನ ಭಾರಿ ಸೆಳವಿಗೆ ಸಿಲುಕಿದ್ದಾರೆ. ಇದನ್ನು ನೋಡಿ ಅವರನ್ನು ಉಳಿಸಲು ಧುಮುಕಿದ ಕಾರು ಚಾಲಕ ಮಹೇಶ್ ಕೂಡ ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಇವರ ಕಿರುಚಾಟ ಕೇಳಿ ರವಿಕುಮಾರ್ ಎಂಬುವವರು ನದಿಗೆ ಇಳಿದು ರಕ್ಷಿಸಲು ಯತ್ನಿಸಿದರಾದರೂ ಸಾಗಲಿಲ್ಲ. ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ರವಿ ಮತ್ತು 4 ವರ್ಷದ ಪುಟ್ಟ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ