Publish Date: Tue, 07 Apr 2026 (15:06 IST)
Updated Date: Tue, 07 Apr 2026 (15:10 IST)
ಬಾಗಲಕೋಟೆ: ವೀರಶೈವ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದರು. ಆದರೆ ಈವರೆಗೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆದರೂ 2ಎ ಕಡೆ ಗಮನ ಕೊಟ್ಟಿಲ್ಲ. ಇಷ್ಟು ಅವಧಿ ಕಣ್ಣು ಮುಚ್ಚಿಕೊಂಡು ಇದ್ದವರು ಈಗ ಚುನಾವಣೆ ಬಂದಾಗ ಸೋಲಿನ ಭೀತಿಯಿಂದ 2ಎಗೆ ಸೇರಿಸುತ್ತೇವೆ ಅಂತಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ದೂರಿದರು.
ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀರಶೈವ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಪ್ರಯತ್ನಗಳು ಆಗಿದ್ದವು. ಆದರೆ ಆಗಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಸೇರಿಸುತ್ತೇವೆ. ಆಗ ಸನ್ಮಾನ ಮಾಡಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದರು. ಆದರೆ ಇನ್ನಾದರೂ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.
ಕಾಂಗ್ರೆಸ್‍ಗೆ ಮತ ನೀಡಿದರೆ 2ಎ ಮೀಸಲಾತಿ ನೀಡುತ್ತೇವೆ ಅಂತಾರೆ. ಬಿಜೆಪಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿತ್ತು. 2ಎ ಗೆ ಸೇರಿಸಲು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಹೋರಾಟ ನಡೆದಿದೆ. 2010 ಕ್ಕಿಂತ ಮುಂಚಿತವಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಯಾವುದೇ ಜಾತಿ ಕಾಲಂನಲಿ ಇರಲಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಸಮಿತಿ ಆಗಿತ್ತು. ಸಚಿವ ಸಂಪುಟ ಸಮಿತಿ ರಚಿಸಲಾಗಿತ್ತು. ನಾನೂ ಸೇರಿ ನಾಲ್ಕು ಮಂದಿ ಸಮಿತಿಯಲ್ಲಿ ಇದ್ದೇವು. ಆಗ 3 ಬಿ ನಲ್ಲಿ ಸೇರಿಸಲು ತೀರ್ಮಾನಿಸಿದ್ದೇವು. ನಂತರ 2ಎ ಗೆ ಸೇರಿಸಲು ಪ್ರಸ್ತಾವ ಮಾಡಿದ್ದೆವು ಎಂದರು. ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ 2ಎ ಗೆ ಸೇರಿಸಿದರೆ ತೊಂದರೆಯಾಗಲಿದೆ ಎಂದು ಹೊಸದಾಗಿ ಕಾಲಂ 2ಸಿ (ಒಕ್ಕಲಿಗ) ಮತ್ತು 2 ಡಿ (ಲಿಂಗಾಯತರಿಗೆ) ಅನ್ನು ಮಾಡಿದೆವು ಎಂದು ವಿವರಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಹೆಬ್ಬಾಳ್ಕರ್ ಅವರು ಸವಾಲು ಹಾಕಿದ್ದರು. 2ಎ ಮಾಡಿದರೆ ಸನ್ಮಾನ ಮಾಡ್ತೀವಿ ಅಂತ ಹೇಳಿದ್ದರು. ಆದರೆ ಈವರೆಗೆ ಇವರು ಈ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ ಎಂದು ದೂರಿದರು. ಈ ಸರ್ಕಾರ 2ಎ ಮಾಡಿದರೆ ಒಂದು ಕೆಜಿ ಆಭರಣ ಮಾಡಿ ಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನ ಮಾಡಿಸುತ್ತೇವೆ. ಪ್ರಶಸ್ತಿಯನ್ನೂ ಕೊಡುತ್ತೇವೆ. ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಾತ್ರವಲ್ಲದೆ ಸಿದ್ರಾಮಯ್ಯ ಅವರಿಗೂ ಸನ್ಮಾನ ಮಾಡ್ತೇವೆ ಎಂದರು.
Krishnaveni K
Publish Date: Tue, 07 Apr 2026 (15:06 IST)
Updated Date: Tue, 07 Apr 2026 (15:10 IST)