ಮೈಸೂರು: ಮುಡಾ ಹಗರಣದ ಪ್ರಕರಣ ಸಂಬಂಧ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಮಂಗಳವಾರ ಮೈಸೂರು ಲೋಕಾಯುಕ್ತ ಎಸ್.ಪಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವಿಚಾರಣೆಗೆ ಪ್ರಕರಣದ ತನಿಖಾಧಿಕಾರಿ ಟಿಜೆ ಉದೇಶ್ ಅವರು ನೀಡಿದ ನೋಟಿಸ್‌ನ ಅನ್ವಯ ನಟೇಶ್ ಅವರು ವಿಚಾರಣೆಗೆ ಹಾಜರಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ ವಿಜಯನಗರದಲ್ಲಿ 14 ನಿವೇಶನಗಳನ್ನು ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಅವರ ಮೇಲಿದೆ.
ಬೆಳಿಗ್ಗೆ 10.30ಕ್ಕೆ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾದ ನಟೇಶ್ ಅವರನ್ನು ಸಂಜೆವರೆಗೂ ವಿಚಾರಣೆ ನಡೆಸಿದರು. ಬದಲಿ ನಿವೇಶನಗಳ ಹಂಚಿಕೆಯ ನಿರ್ಣಯ, ವಿಜಯನಗರದಲ್ಲೇ ನಿವೇಶನಗಳನ್ನು ನೀಡಿದ್ದರ ಕುರಿತು ಅಧಿಕಾರಿಗಳ ತಂಡವು ಪ್ರಶ್ನಿಸಿ ಮಾಹಿತಿ ಪಡೆಯಿತು.