ಮೈಸೂರು: ಸಿಎಂ ಸಿದ್ದರಾಮಯ್ಯ ಬಳಿಕ ಈಗ ಮುಡಾ ಹಗರಣ ಸಂಕಷ್ಟ ಶಾಸಕ ಜಿಟಿ ದೇವೇಗೌಡರಿಗೂ ತಟ್ಟಿದೆ. ತಮ್ಮ ಪ್ರಭಾವ ಬಳಸಿ ಪುತ್ರಿ, ಅಳಿಯನಿಗೆ ಸೈಟು ಕೊಡಿಸಿದ ಆರೋಪಕ್ಕೊಳಗಾಗಿದ್ದಾರೆ.
ಈ ಬಗ್ಗೆ ಸಿಎಂ ಪ್ರಕರಣದಲ್ಲಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಚಾಮುಂಡಿಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಜಿಟಿ ದೇವೇಗೌಡ ತಮ್ಮ ಪ್ರಭಾವ ಬಳಸಿ ಮಗಳು, ಅಳಿಯನಿಗೆ ಮುಡಾ ಸೈಟು ಕೊಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಜಿಟಿ ದೇವೇಗೌಡ ಮೇಲಿನ ದೂರುಗಳೇನು?
ಸರ್ಕಾರಕ್ಕೆ ಸೇರಿದ ಮತ್ತು ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ಬಾಕಿಯಿರುವ ಜಾಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಕೆ ಚೌಡಯ್ಯ ಎಂಬವರಿಗೆ 50:50 ಅನುಪಾತದಲ್ಲಿ ಮುಡಾದಲ್ಲಿ ಆರು ನಿವೇಶನಗಳನ್ನು ಕೊಡಿಸಿದ್ದಾರೆ. ಇದರಲ್ಲಿ ಎರಡು ಸೈಟುಗಳನ್ನು ಮಗಳು ಅನ್ನಪೂರ್ಣೆ ಮತ್ತು ಅಳಿಯ ವಿಶ್ವೇಶ್ವರಯ್ಯನವರ ಹೆಸರಿಗೆ ಮಾಡಿಸಿದ್ದಾರೆ. ಮೈಸೂರು ತಾಲೂಕಿನ ಕಸಾಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂ. 154 ರ ಆರ್ ಟಿಸಿ ಪ್ರತಿಯಲ್ಲಿನ 9 ನೇ ಕಾಲಂನಲ್ಲಿ ಜವರಯ್ಯ ಕೆ ಬೋರಯ್ಯ ಚೌಡಯ್ಯ ಪುಟ್ಟಣ್ಣಯ್ಯ ಗಂಗಾಧರ ಎಂಬವರ ಹೆಸರಿಗೆ 3.38 ಎಕರೆ ಜಮೀನಿನ ಜಂಟಿ ಖಾತೆಯಿದೆ. ಇದೇ ಆರ್ ಟಿಸಿಯ 11 ನೇ ಕಾಲಂನಲ್ಲಿ ನಗರದ ಭೂಮಿತಿ ಕಾಯ್ದೆಗೆ ಒಳಪಟ್ಟಿದೆ ಎಂದಿದೆ. ಅಂದರೆ ಸರ್ಕಾರದ ಭೂಮಿ ಎಂದರ್ಥ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.