ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಸ್ಥಾನಕ್ಕೆ ಕೆ.ಮರೀಗೌಡ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪ ಚೋಳನ್ ಅವರಿಗೆ ಇಂದು ರಾಜೀನಾಮೆ ಸಲ್ಲಿಸಿದರು.
ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಚೇರಿಗೆ ಹಾಜರಾಗಿ ರಾಜೀನಾಮೆ ಸಲ್ಲಿಸಿದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ರು. ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಆರೋಗ್ಯವು ಸರಿಯಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಮುಡಾ ತನಿಖೆ ನಡೆಯುತ್ತಿದೆ. ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತ ನಾನು ಹೇಳೊಲ್ಲ. ಈಗ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರುತ್ತೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ ಅಷ್ಟೆ. ಸೈಟ್ ವಿಚಾರವಾಗಿ ಸಿಎಂ ಅವರು ಯಾವುದೇ ಒತ್ತಡ ನನ್ನ ಮೇಲೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡು ಬಾರಿ ಸ್ಟ್ರೋಕ್ ಆಯ್ತು. ಆರೋಗ್ಯ ಸರಿಯಿಲ್ಲ. ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರೆಯಲು ಆಗೊಲ್ಲ ಅಂತ ರಾಜೀನಾಮೆ ಕೊಟ್ಟಿದ್ದೇನೆ. ಇಲಾಖೆ ಸಚಿವರು ರಾಜೀನಾಮೆಗೆ ಒತ್ತಡ ಮಾಡಿದ್ರು ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದರು.