ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜಾತಿಗಣತಿ ವಿಚಾರ ಸದ್ದು ಮಾಡುತ್ತಿರುವಾಗಲೇ ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಇದು ಜಾತ್ಯಾತೀತ ರಾಷ್ಟ್ರ, ಇಲ್ಲಿ ಜಾತಿ ಗಣತಿಗೆ ಮಹತ್ವವಿಲ್ಲ ಎಂದಿದ್ದಾರೆ.
ಇಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತಿದೆ. ನಮ್ಮ ಸಂವಿಧಾನವೇ ಜಾತಿಗೆ ಮಹತ್ವವಿಲ್ಲ ಎಂದಿದೆ. ಹಾಗಿರುವಾಗ ಜಾತಿ ಗಣತಿಯ ಅಗತ್ಯವೇನು ಎಂದು ಗೊತ್ತಾಗುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟದ ಸಮೀಕ್ಷೆ ಮಾಡಿ. ಅದರ ಬದಲು ಜಾತಿಗಣತಿ ಮಾಡಿ ಜಾತಿ ಜಾತಿಗಳ ನಡುವೆ ತಂದಿಡಬೇಡಿ. ಎಲ್ಲಾ ಜಾತಿಯಲ್ಲಿ ಬಡವರಿದ್ದಾರೆ. ಎಲ್ಲರನ್ನೂ ಮೇಲೆತ್ತುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸರಿಯಾಗಿ ಚರ್ಚೆ ನಡೆಸದೇ ಆತುರದ ನಿರ್ಧಾರ ತಾಳುವುದು ಸರಿಯಲ್ಲ ಎಂದಿದ್ದಾರೆ.
ಈ ನಡುವೆ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಚಾರ ಚರ್ಚೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನಗೊಂಡಿರುವ ಒಕ್ಕಲಿಗ ಸಮುದಾಯದವರ ಜೊತೆ ಸಭೆ ಕರೆದಿದ್ದಾರೆ.