ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಕುಂದಾನಗರಿ ಬೆಳಗಾವಿಗೆ ಆಗಮಿಸಿದಾಗ ಕೇವಲ ಭ್ರಷ್ಟಾಚಾರದ ಕುರಿತು ಮಾತನಾಡಿದರು. ಆದರೆ, ರಾಜ್ಯದಲ್ಲಿ ಮಹಾ ಭ್ರಷ್ಟಾಚಾರ ಮಾಡಿದವರು ಅವರ ಪಕ್ಕದಲ್ಲೇ ನಿಂತಿದ್ದು ದುರಂತವೇ ಸರಿ ಎಂದು ಕೇಂದ್ರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಏಕಾಏಕಿ 500, 1000 ರೂಪಾಯಿ ನೋಟ್ ಬ್ಯಾನ್ ಮಾಡುವ ಮೂಲಕ ಪ್ರಧಾನಿ ಮೋದಿ ಪ್ರತಿ ಮನೆಯಲ್ಲಿ ದಿನಕ್ಕೊಬ್ಬರಂತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದ್ದಾರೆ. ಇದು ಕೇಂದ್ರ ಸರಕಾರ ಮಾಡಿದ ಸಾಧನೆ. ನೋಟು ಬ್ಯಾನ್ ಮಾಡಿರುವುದು ಯಾರಿಗೆ ಉಪಯೋಗವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಜನತೆಯ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ನನ್ನ ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಆದರೆ, ರಾಜ್ಯ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ