ಬೆಳಗಾವಿ: ಊಟಕ್ಕೂ ಬಿಡಲ್ಲ, ಶುಗರ್ ಪೇಷೆಂಟ್ ಗಳಿದ್ದರೆ ಏನು ಗತಿ?.. ಹೀಗಂತ ಇಂದು ಸದನದಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸದನಕ್ಕೆ ಯಾರೇ ತಡವಾಗಿ ಬಂದರೂ ಅಥವಾ ಗೈರಾದರೂ ಇಲ್ಲವೇ ಬಂದೂ ಅತ್ತಿತ್ತ ಓಡಾಡುತ್ತಿದ್ದರೆ ಸ್ಪೀಕರ್ ಯುಟಿ ಖಾದರ್ ಹೆಡ್ ಮಾಸ್ಟ್ರ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇಂದು ಊಟಕ್ಕೆ ಬಿಡ್ತಿಲ್ಲ ಎಂದು ಕೆಲವು ಶಾಸಕರು ಅಸಮಾಧಾನ ಹೊರಹಾಕಿದರು.
ಶಿವಲಿಂಗೇ ಗೌಡ ಮಾತನಾಡಲು ಎದ್ದು ನಿಂತಾಗ ಕೆಲವು ಶಾಸಕರು ಊಟ ಮಾಡಕ್ಕಾದರೂ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಯುಟಿ ಖಾದರ್ ಒಂದು ನಿಮಿಷ ಕೂತ್ಕೊಳ್ಳಿ. ಅವರು ಮಾತನಾಡಿ ಆಗಲಿ ಎಂದಿದ್ದಾರೆ. ಇದಕ್ಕೆ ಶಾಸಕರೊಬ್ಬರು ಮಾನ್ಯ ಅಧ್ಯಕ್ಷರೇ ಒಂದು ಅರ್ಧ ಗಂಟೆ ಊಟಕ್ಕಾದರೂ ಬಿಡಿ, ಶುಗರ್ ಪೇಷೆಂಟ್ ಇದ್ರೆ ಏನು ಗತಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪೀಕರ್ ಆಗ ಅರ್ಧಗಂಟೆ ಇತ್ತಲ್ವಾ? ನೀವು ಊಟ ಮಾಡಿಕೊಂಡೇ ಬಂದಿದ್ದಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಾಸಕರು, ಮೀಡಿಯಾದವರು ಕರೆದರು ಎಂದು ಮಾತನಾಡಲು ಹೊಗಿದ್ದೆವು. ಈಗ ಊಟಕ್ಕೆ ಹೋಗಲು ಅವಕಾಶ ಕೊಡಿ ಎಂದು ಕೇಳಿದ್ದಾರೆ. ಕೊನೆಗೆ ಸ್ಪೀಕರ್ ಖಾದರ್ ನೀವು ಹೋಗಿ ಬನ್ನಿ, ಊಟ ಮಾಡಿ ಎಂದು ಕಳುಹಿಸಿಕೊಟ್ಟರು.