ಬೆಂಗಳೂರು: ಕೊಳವೆ ಬಾವಿಗಳು ಉಪಯೋಗಕ್ಕೆ ಇಲ್ಲದೇ ಹೋದಾಗ ಅದನ್ನು ಹಾಗೆಯೇ ತೆರೆದಿಟ್ಟರೆ ಇನ್ನು ಮುಂದೆ ಆಯಾ ಮಾಲಿಕರು ಜೈಲು ಶಿಕ್ಷೆ ಮತ್ತು ದಂಡ ತೆರಬೇಕಾಗುತ್ತದೆ.
ನಿನ್ನೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಈ ಘೋಷಣೆ ಮಾಡಿದೆ. ತೆರೆದ ಕೊಳವೆ ಬಾವಿಗಳಿಂದ ಎಷ್ಟೋ ದುರಂತ ಪ್ರಕರಣಗಳು ನಡೆಯುತ್ತವೆ. ಕೊಳವೆ ಬಾವಿ ಉಪಯೋಗವಿಲ್ಲದೇ ಹೋದಾಗ ಕೆಲವರು ಅದನ್ನು ಮುಚ್ಚಿ ಅಪಾಯವಾಗದಂತೆ ಮಾಡುವ ಔದಾರ್ಯವನ್ನೂ ತೋರುವುದಿಲ್ಲ.
ಇನ್ನು ಮುಂದೆ ಇಂತಹ ಉದಾಸೀನತೆ ಮಾಡಿದರೆ ಮಾಲಿಕರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ. ಇಂತಹದ್ದೊಂದು ನಿಯಮವನ್ನು ನಿನ್ನೆ ಅಧಿವೇಶನದಲ್ಲಿ ಪಾಸ್ ಮಾಡಲಾಯಿತು. ನಿನ್ನೆ ಮಂಡಿಸಲಾದ ಒಟ್ಟು 8 ವಿದೇಯಕಗಳಲ್ಲಿ ಇದೂ ಒಂದಾಗಿತ್ತು.
ಸಚಿವ ಎನ್ ಎಸ್ ಬೋಸರಾಜು ಮಂಡಿಸಿದ ಉಪಯೋಗವಿಲ್ಲದ. ಕಾರ್ಯಸ್ಥಗಿತಗೊಂಡ ಕೊಳವೆ ಬಾವಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚದೇ ಅವಘಡಕ್ಕೆ ಕಾರಣವಾಗುವವರಿಗೆ 1 ವರ್ಷ ಜೈಲು ಮತ್ತು 20 ಸಾವಿರ ದಂಡದ ಶಿಕ್ಷೆ ವಿಧಿಸುವ ಕರ್ನಾಟಕ ಅಂತರ್ಜಲ ವಿಧೇಯಕ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು. ಕೊಳವೆ ಬಾವಿ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ವಿಧೇಯಕವಾಗಿದೆ. ನಿನ್ನೆ ವಿಧಾನಸಭೆ ಕಲಾಪಗಳು ತಡರಾತ್ರಿ 1 ಗಂಟೆಯವರೆಗೂ ನಡೆದಿದ್ದು ವಿಶೇಷವಾಗಿತ್ತು. ಈ ವೇಳೆ ಅನೇಕ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಹೀಗಾಗಿ ನಿನ್ನೆಯ ದಿನದ ಅಧಿವೇಶನ ಫಲಪ್ರದವಾಗಿತ್ತು ಎಂದೇ ಹೇಳಬಹುದಾಗಿದೆ.