Publish Date: Tue, 15 Jan 2019 (17:42 IST)
Updated Date: Tue, 15 Jan 2019 (17:43 IST)
ಕಳೆದ ಮೂರ್ನಾಲ್ಕು ದಿನಗಳಿಂದ ಯಾರ ಕೈಗೂ ಸಿಗದಿದ್ದ ಕಲಬುರ್ಗಿ ಜಿಲ್ಲೆ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಮುಂಬೈಯಲ್ಲಿ ಪ್ರತ್ಯಕ್ಷಗೊಂಡಿದ್ದಾರೆ.
ಮಹಾರಾಷ್ಟ್ರದ ಪೌರಾದೇವಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಧರ್ಮಗುರು ರಾಮರಾವ್ ಮಹಾರಾಜ್ ಅವರ ಆಶೀರ್ವಾದ ಪಡೆದ ನಂತರ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಅಪರೇಷನ್ ಕಮಲ ಎಂದೇನು ಇಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರ ಮೇಲಿನ ಬೇಜಾರಿನಿಂದ ಉಮೇಶ್ ಜಾಧವ್ ಈ ರೀತಿ ಮಾಡುತ್ತಿದ್ದಾರೆ ಎಂದು ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಸ್ಪಷ್ಟಪಡಿಸಿದ್ದಾರೆ.
ಇನ್ನೆರಡು ದಿನಗಳೊಳಗಾಗಿ ಕಲಬುರ್ಗಿಗೆ ಆಗಮಿಸುವ ಸಾಧ್ಯತೆಗಳಿದ್ದು, ಬೆಂಬಲಿಗರ ಜೊತೆ ಸಭೆ ನಡೆಸಿದ ನಂತರ ಉಮೇಶ್ ಜಾಧವ್ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಚಿಂಚೋಳಿ ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಪೂರಕವಾಗಿ, ಬೆಂಬಲಿಗರ ಅಭಿಪ್ರಾಯದಂತೆ ಅವರು ಮುಂದಿನ ಹೆಜ್ಜೆ ಇಡಲಿದ್ದಾರೆ. ಕೆಲವೇ ದಿನಗಳಲ್ಲಿ ಇದೆಲ್ಲಕ್ಕೂ ಉತ್ತರ ಸಿಗಲಿದೆ ಎಂದು ರಾಮಚಂದ್ರ ಜಾಧವ್ ತಿಳಿಸಿದ್ದಾರೆ.
ಉಮೇಶ್ ಜಾಧವ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಜಾಧವ್ ಬೆಂಬಲಿಗರೂ ಕಲಬುರ್ಗಿಯ ಬೇಂದ್ರೆ ನಗರದಲ್ಲಿರುವ ಅವರ ಮನೆಗೆ ಬೇಟಿ ನೀಡಿ, ಕುಟುಂಬದ ಸದಸ್ಯರೊಂದಿಗೆ ಚರ್ಚಿಸುತ್ತಿದ್ದಾರೆ.