ಬೆಂಗಳೂರು: ಇಂದು ಆರ್ ಆರ್ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ, ಕಲ್ಲು ಎಸೆದು ದಾಳಿ ಮಾಡಲಾಗಿದೆ. ಇದಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ನನಗೆ ಜೀವ ಬೆದರಿಕೆಯಿದೆ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ನನಗೆ ಜೀವ ಬೆದರಿಕೆಯಿದೆ. ಕೋರ್ಟ್ ಗೆ ಹೋಗಿದ್ದಾಗ ಲಾಯರ್ ರೂಪದಲ್ಲಿ ಒಬ್ಬರು ಬಂದಿದ್ದವರು ಇದೇ ಮಾತನ್ನು ಹೇಳಿದ್ದರು. ನಾನು ಹೊರಗೆ ಬರುವಂತೆಯೇ ಇಲ್ಲ. ಬಂದರೆ ಕೊಲೆಯಾಗಲಿದೆ ಎನ್ನುತ್ತಿದ್ದರು.
ಈವತ್ತೂ ಸಹ, ಸುಮಾರು 100 ಪೊಲೀಸರಿದ್ದರು. ಘಟನೆ ನಡೆದ ಬಳಿಕ ಪೊಲೀಸರೇ ನನಗೆ ಹೇಳಿದ್ದಾರೆ, ನನ್ನ ಕೊಲೆ ಪ್ರಯತ್ನವಾಗುತ್ತದೆ ಎಂದು ಮಾಹಿತಿಯಿತ್ತು ಎಂದು. ಇದರ ಬಗ್ಗೆ ಯಾರಿಗೂ ಹೇಳಬೇಡಿ ಎಂದೂ ಹೇಳಿದ್ದರು. ಇದೆಲ್ಲಾ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಮತ್ತು ಕುಸುಮಾ ರವಿ ಕುಮ್ಮಕ್ಕಿನಿಂದಲೇ ನಡೆಯುತ್ತಿರುವುದು ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ರಾಜೀನಾಮೆಗೆ ಹಲವು ದಿನಗಳಿಂದ ಒತ್ತಡ ಕೇಳಿಬರುತ್ತಿದೆ. ರಾಜೀನಾಮೆ ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರಿಗೆ ಹೇಳಿ ಏನೂ ಉಪಯೋಗವಿಲ್ಲ. ಹೀಗಾಗಿ ನನಗೆ ಏನೇ ಆದರೂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಸೇರಿದಂತೆ ಕೆಲವು ನಾಯಕರೇ ಕಾರಣ ಎಂದು ಈಗಾಗಲೇ ಪ್ರಧಾನ ಮಂತ್ರಿಗಳಿಗೆ, ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ.