ಬೆಂಗಳೂರು: ತಮ್ಮ ಇಲಾಖೆಯಲ್ಲಿ ಲಂಚ ಕೇಳ್ತಾರೆ ಎಂಬ ಆರೋಪಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ಯಾರೇ ಲಂಚ ಕೇಳಿದ್ರೂ ಹುಳ ಬಿದ್ದು ಸಾಯ್ತಾರೆ ಎಂದು ಶಾಪ ಹಾಕಿದ್ದಾರೆ.
ಮನೆ ವಿತರಣೆ ಮಾಡಲು ಅಧಿಕಾರಿಗಳು ವಸತಿ ಇಲಾಖೆಯಲ್ಲಿ ಲಂಚ ಕೇಳ್ತಿದ್ದಾರೆ ಎಂದು ಆರೋಪಗಳಿವೆ. ಈ ಬಗ್ಗೆ ಮಾಧ್ಯಮಗಳು ಇಂದು ಸಚಿವ ಜಮೀರ್ ಅಹ್ಮದ್ ಗಮನ ಸೆಳೆದರು. ನಿಮ್ಮ ಇಲಾಖೆಯಲ್ಲಿ ಮನೆ ಮಂಜೂರು ಮಾಡಿಕೊಡಲು ಲಂಚ ಕೇಳ್ತಿದ್ದಾರೆ ಎಂಬ ಆರೋಪಗಳಿವೆ ಸಾರ್ ಎಂದಿದ್ದಕ್ಕೆ ಜಮೀರ್ ಶಾಪ ಹಾಕಿದ್ದಾರೆ.
ನನ್ನನ್ನೂ ಸೇರಿಸಿ ಯಾರೇ ಲಂಚ ಕೇಳಿದ್ರೂ ಅವರು ಹುಳ ಬಿದ್ದು ಸಾಯ್ತಾರೆ ಎಂದು ಹಿಡಿಶಾಪ ಹಾಕಿದ್ದಾರೆ. ಆಶ್ರಯ ಮನೆ ಮಂಜೂರು ಮಾಡಲು ಪ್ರತೀ ಮನೆಗೆ 50 ಸಾವಿರ ರೂ. ಗಳಂತೆ ಲಂಚ ಕೇಳ್ತಿದ್ದಾರೆ ಎಂದು ಆರೋಪಗಳಿವೆ ಎಂದು ಸಚಿವರ ಗಮನ ಸೆಳೆಯಲಾಯಿತು.
ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮನೆಗಳು ಸಾಂಕ್ಷನ್ ಆಗಿತ್ತು. ಅದನ್ನೆಲ್ಲಾ ಈಗ ಮಂಜೂರು ಮಾಡ್ತಾ ಇದ್ದೇವೆ. ಲಾಟರಿ ಮೂಲಕ ಅರ್ಹರಿಗೆ ಮನೆ ಕೊಡ್ತಿದ್ದಾರೆ. ಒಂದು ವೇಳೆ ಯಾರಾದ್ರೂ ಲಂಚ ತೆಗೆದುಕೊಳ್ತಾರೆ ಎಂದು ಅವರ ಮಕ್ಕಳಿಗೆ ಒಳ್ಳೆಯದಾಗಲ್ಲ, ಹುಳ ಬಿದ್ದು ಸಾಯ್ತಾರೆ ಎಂದಷ್ಟೇ ಹೇಳಲು ಬಯಸ್ತೀನಿ ಎಂದು ಜಮೀರ್ ಶಾಪ ಹಾಕಿದ್ದಾರೆ.