Select Your Language

Notifications

webdunia
webdunia
webdunia
webdunia

ಸಚಿವ ಎಸ್.ಟಿ.ಸೋಮಶೇಖರ್‌ ಭ್ರಷ್ಟಾಚಾರದಿಂದಾಗಿ ಅಭಿವೃದ್ಧಿ ಮರೀಚಿಕೆ

ಸಚಿವ ಎಸ್.ಟಿ.ಸೋಮಶೇಖರ್‌ ಭ್ರಷ್ಟಾಚಾರದಿಂದಾಗಿ ಅಭಿವೃದ್ಧಿ ಮರೀಚಿಕೆ
bangalore , ಗುರುವಾರ, 9 ಡಿಸೆಂಬರ್ 2021 (19:55 IST)
ಅಪ್ಲಿಕೇಶನ್
ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕಳೆದ ಹತ್ತಾರು ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನವನ್ನು ಯಶವಂತಪುರ ಕ್ಷೇತ್ರಕ್ಕೆ ತಂದರೂ ಕ್ಷೇತ್ರ ಅಭಿವೃದ್ಧಿಯಾಗದಿರುವುದಕ್ಕೆ ಶೇ. 40ರಷ್ಟು ಭ್ರಷ್ಟಾಚಾರವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
 
ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ನಡೆಸುತ್ತಿರುವ ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ, ಯಶವಂತಪುರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಿ ಸಂಗ್ರಹಿಸಿ ಮೋಹನ್‌ ದಾಸರಿ ಮಾತನಾಡಿದರು.
 
ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ  ಕ್ಷೇತ್ರದ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಸರ್ಕಾರದ ಅನುದಾನವನ್ನು ತಮ್ಮ ಜೇಬಿಗೆ ಹಾಕಿಕೊಂಡು ಶಾಸಕರು ಅಭಿವೃದ್ಧಿಯಾಗಿದ್ದಾರೆ. ತೆರಿಗೆ ಕಟ್ಟಿದ ಸಾಮಾನ್ಯ ಜನರು ಜೀವಭಯದಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಸಹಿ ಸಂಗ್ರಹಿಸಲು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿರುವಾಗ ಜನರು ಶಾಸಕರಿಗೆ ಹಿಡಿಶಾಪ ಹಾಕುತ್ತಿರುವುದು ಕೇಳಿಸುತ್ತಿದೆ ಎಂದು ಮೋಹನ್‌ ದಾಸರಿ ಹೇಳಿದರು.
 
ಯಶವಂತಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಡಾ. ಸತೀಶ್‌ ಕುಮಾರ್‌ ಮಾತನಾಡಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಅಕ್ರಮವನ್ನು ಬಿಚ್ಚಿಟ್ಟಿದ್ದರೂ ಸೂಕ್ತ ತನಿಖೆಗೆ ಆದೇಶಿಸಿಲ್ಲ. ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗದ ಹೊರತು ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗುವುದಿಲ್ಲ ಎಂದು ಕಿಡಿ ಕಾರಿದರು. 
 
ರಾಜರಾಜೇಶ್ವರಿ ನಗರ ಕ್ಷೇತ್ರದ ಎಪಿಪಿ ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ತೆರಿಗೆ ಕಟ್ಟುವ ಜನರಿಗೆ ಸರಿಯಾದ ರಸ್ತೆಗಳನ್ನು ಪಡೆಯುವ ಸಂಪೂರ್ಣ ಹಕ್ಕು ಇದೆ. ಇವುಗಳನ್ನು ಪಡೆಯುವುದಕ್ಕಾಗಿಯೇ ಜನರ ವಾಹನ ತೆರಿಗೆ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಜಿಎಸ್‌ಟಿ ಮುಂತಾದವುಗಳನ್ನು ಕಟ್ಟಲಾಗುತ್ತದೆ. ರಸ್ತೆ ದುರಸ್ತಿಗಾಗಿ ಸರ್ಕಾರದ ಬೊಕ್ಕಸದಿಂದ 20 ಸಾವಿರ ಕೋಟಿ ರೂಪಾಯಿ ಖರ್ಚಾದರೂ ಗುಂಡಿಗಳು ಕಡಿಮೆಯಾಗಲಿಲ್ಲ. ದುಡ್ಡು ಕೊಳ್ಳಲು ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ, ಕೇವಲ ಒಂದು ತಿಂಗಳೊಳಗೆ ಕಿತ್ತುಹೋಗುವಷ್ಟು ಕಳಪೆ ಕಾಮಗಾರಿಯಾಗಿದೆ.
 
ಬೆಂಗಳೂರು ನಗರ ಎಪಿಐ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ, ಪಕ್ಷದ ಮುಖಂಡರಾದ ಸುರೇಶ್ ರಾಥೋಡ್, ಶಶಿಧರ್, ಸುಹಾಸಿನಿ, ಚನ್ನಕೇಶವ, ಮಂಜುನಾಥ ಸೇರಿದಂತೆ ಸ್ಥಳೀಯ ಸಂಸ್ಥೆ, ಕಾರ್ಯಕರ್ತರು ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕುಖ್ಯಾತ ರೌಡಿಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನ: ಆರೋಪಿಗಳ ಪತ್ತೆಗೆ ನಾಲ್ಕು ತಂಡ..!