ಬೆಂಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡಬೇಡಿ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯ ಹೊರತಾಗಿಯೂ ಈಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಕ್ತಿ ಯೋಜನೆ ನಡೆಸುವುದು ಕಷ್ಟವಾಗ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಬಸ್ ಪ್ರಯಾಣ ಮಾಡಲು ಅವಕಾಶ ನೀಡುವ ಶಕ್ತಿ ಯೋಜನೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಅನ್ವಯ ಕರ್ನಾಟಕದ ವಿಳಾಸವಿರುವ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರೆಲ್ಲರಿಗೂ ಉಚಿತವಾಗಿ ಬಿಎಂಟಿಸಿ ಮತ್ತು ಕೆಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಲು ಅವಕಾಶವಿದೆ.
ಮೊನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಶಕ್ತಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಮುಂದೆಯೇ ಡಿಕೆಶಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಈ ಘಟನೆ ಮಾಸುವ ಮುನ್ನವೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಕ್ತಿ ಯೋಜನೆ ನಡೆಸಲು ಕಷ್ಟವಾಗ್ತಿದೆ ಎಂದಿದ್ದಾರೆ. ಶಕ್ತಿ ಯೋಜನೆ ಮುನ್ನಡೆಸಲು ಸ್ವಲ್ಪ ಕಷ್ಟವಾಗ್ತಿದೆ. ಆದರೂ ನಾವು ಯೋಜನೆಯನ್ನು ಮುಂದುವರಿಸಲಿದ್ದೇವೆ ಎಂದಿದ್ದಾರೆ. ಅನ್ನಭಾಗ್ಯ ಯೋಜನೆಗೆ ಬಿಪಿಎಲ್ ಕಾರ್ಡ್ ದಾರರು ಮಾತ್ರ ಫಲಾನುಭವಿಗಳು. ಆದರೆ ಶಕ್ತಿ ಯೋಜನೆ ಹಾಗಲ್ಲ. ಎಲ್ಲರಿಗೂ ಉಚಿತ ಕೊಡಬೇಕಾಗುತ್ತದೆ ಎಂದಿದ್ದಾರೆ.