ಬೆಂಗಳೂರು- ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು 2020 ಡಿಸೆಂಬರ್ ಹಾಗೂ 2021ರಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾರ್ಚ್ 4ರಂದು ಬೆಂಗಳೂರು ಚಲೋ, ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಹೇಳಿದ್ದರು.ಈ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ನೌಕರರ ಸಭೆ ಕರೆದಿದ್ದು, ಗುರುವಾರ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಭೆ ನಡೆಯಲಿದೆ.
ಸಮಾನ ವೇತನ, ಸರ್ಕಾರಿ ನೌಕರರೆಂದು ಪರಿಗಣನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಅಂದಿನ ಸರ್ಕಾರ ಭರವಸೆಗಳನ್ನು ಕೊಟ್ಟು ಕೈತೊಳೆದುಕೊಂಡಿತ್ತು. ಆದರೆ ಈವರೆಗೂ ಸಾರಿಗೆ ಸಿಬ್ಬಂದಿಗಳ 6 ಬೇಡಿಕೆಗಳು ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಕ್ತಿ ಯೋಜನೆಯಲ್ಲಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. 5 ವರ್ಷ ಯೋಜನೆ ಮುಂದುವರೆಯಲಿದೆ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಅಗಲೂ ಶಕ್ತಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
4 ವರ್ಷಗಳಿಂದ ಒಂದು ಬಸ್ ಖರೀದಿ ಮಾಡಿರಲಿಲ್ಲ. ನಾವು ಈಗ ಸುಮಾರು 5 ಸಾವಿರ ಬಸ್ ಗಳು ಖರೀದಿಗೆ ನಿರ್ಧಾರ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಖಾಲಿ ಹುದ್ದೆ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ 9 ಸಾವಿರ ಹುದ್ದೆ ನೇಮಕಕ್ಕೆ ಸಿಎಂ ಒಪ್ಪಿದ್ದಾರೆ. ಪ್ರಕ್ರಿಯೆ ಶುರುವಾಗಿದೆ. ಆದಷ್ಟು ಬೇಗ 9 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ. ಇಲ್ಲಿಯವರಗೆ 146 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಓಡಾಡಿದ್ದಾರೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ. ಬಿಜೆಪಿಗಿಂತ ಉತ್ತಮವಾಗಿ ಇಲಾಖೆ ನಾವು ನಡೆಸಿದ್ದೇವೆ. ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಶಕ್ತಿ ಯೋಜನೆ ಮುಂದೆವರೆಸುತ್ತೇವೆ ಎಂದು ಹೇಳಿದರು.