ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಸುಜಾ ಕುಶಾಲಪ್ಪ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮಂಥರ್ ಗೌಡ ಅವರನ್ನು 102 ಮತಗಳಿಂದ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದ್ದಾರೆ.
ನಗರದ ಸಂತ ಜೋಸೆಫರ ಶಾಲೆ ಆವರಣದಲ್ಲಿ ನಡೆದ ಮೊದಲ ಸುತ್ತಿನ ಮತ ಎಣಿಕೆಯ ಸಂದರ್ಭ ಬಿಜೆಪಿಯ ಸುಜಾ ಕುಶಾಲಪ್ಪ ಅವರು 93 ಮತಗಳ ಮುನ್ನಡೆ ಸಾಧಿಸಿದ್ದರೆ, ಕೊನೆಯ ಸುತ್ತಿನಲ್ಲಿ 102 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸುಜಾಕುಶಾಲಪ್ಪ ಅವರು 705 ಮತಗಳನ್ನು ಪಡೆದರೆ, ಮಂಥರ್ ಗೌಡ 603 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.17ಮತಗಳು ಕುಲಗೆಟ್ಟಿದ್ದವು.
ಡಿ.10ರಂದು ನಡೆದ ಚುನಾವಣೆಯಲ್ಲಿ 638 ಪುರುಷ ಹಾಗೂ 687 ಮಹಿಳೆಯರು ಸೇರಿದಂತೆ 1325 ಮಂದಿ ಮತ ಚಲಾಯಿಸಿದ್ದರು.
ಎಣಿಕೆಗೂ ಮುನ್ನ ಎಲ್ಲಾ ಮತ ಪತ್ರಗಳನ್ನು ಮಿಶ್ರಣ ಮಾಡಿ ತಲಾ 20 ಮತಪತ್ರಗಳಂತೆ ಕಟ್ಟುಗಳನ್ನು ಮಾಡಲಾಯಿತು.
ಆರು ಟೇಬಲ್ಗಳಲ್ಲಿ ಮತ ಎಣಿಕೆ ನಡೆಸಲಾಯಿತು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಜಿಲ್ಲೆಯ ಮೂಲೆಮೂಲೆಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರಾದರೂ,ಮತ ಎಣಿಕೆ ಸಂದರ್ಭ ಮಂಥರ್ ಗೌಡ ಅವರ ಹಿನ್ನಡೆ ಕಂಡು ಹಲವು ಕಾಂಗ್ರೆಸ್ ಕಾರ್ಯಕರ್ತರು ಜಾಗ ಖಾಲಿ ಮಾಡಿದ್ದರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪಕ್ಷದ ವರಿಷ್ಠರು ಎಡವಿದ್ದೇ ಮಂಥರ್ ಗೌಡ ಸೋಲಿಗೆ ಕಾರಣ ಎಂಬ ಅಭಿಪ್ರಾಯ ಕಾರ್ಯಕರ್ತರದ ಕೇಳಿ ಬಂದಿತು.
ಮತ ಎಣಿಕೆ ಕೇಂದ್ರ ಹಾಗೂ ಸುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.