ಬೆಂಗಳೂರು: ಫೇಸ್ ಬುಕ್ ನಲ್ಲಿ ಕನ್ನಡ ಅನುವಾದದಿಂದ ಆದ ಎಡವಟ್ಟಿಗೆ ಮೆಟಾ ಸಂಸ್ಥೆ ಸಿಎಂ ಸಿದ್ದರಾಮಯ್ಯನವರಿಗೆ ಕ್ಷಮೆ ಯಾಚಿಸಿದೆ. ಅಷ್ಟಕ್ಕೂ ಈ ಗೊಂದಲವಾಗಿದ್ದು ಯಾಕೆ? ಇಲ್ಲಿದೆ ವಿವರ.
ಸೋಷಿಯಲ್ ಮೀಡಿಯಾದಲ್ಲಿ ಸ್ವಯಂ ಅನುವಾದ ವ್ಯವಸ್ಥೆ ಇದೆ. ಆದರೆ ಇದರಿಂದ ಹಲವು ಬಾರಿ ಎಡವಟ್ಟುಗಳಾದ ಉದಾಹರಣೆಗಳಿವೆ. ಅದೀಗ ಸ್ವತಃ ಸಿಎಂ ಸಿದ್ದರಾಮಯ್ಯಗೆ ಅನುಭವವಾಗಿದೆ.
ಇತ್ತೀಚೆಗೆ ನಿಧನರಾದ ಹಿರಿಯ ತಾರೆ ಸರೋಜಾ ದೇವಿಯವರಿಗೆ ಅಂತಿಮ ನಮನ ಸಲ್ಲಿಸಿದ ಬಗ್ಗೆ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಇದನ್ನು ಸ್ವಯಂ ಅನುವಾದ ಟೂಲ್ ನಲ್ಲಿ ಕನ್ನಡಕ್ಕೆ ಅನುವಾದಿಸಿದಾಗ ಅನರ್ಥವಾಗಿತ್ತು. ಇದರ ಬಗ್ಗೆ ಸಿಎಂ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಮೆಟಾಗೆ ಪತ್ರ ಬರೆದು ಆಕ್ಷೇಪಿಸಿದ್ದರು.
ಇಂತಹ ಅನರ್ಥವಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಸದ್ಯದ ಮಟ್ಟಿಗೆ ಅನುವಾದವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದರು. ಇದೀಗ ಮೆಟಾ ಸಂಸ್ಥೆ ಇದಕ್ಕೆ ಪ್ರತಿಕ್ರಿಯಿಸಿದ್ದು ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಿದೆ. ಅಲ್ಲದೇ ತಪ್ಪು ಸರಿಪಡಿಸಿಕೊಳ್ಳುವುದಾಗಿ ಹೇಳಿದೆ.