Publish Date: Thu, 15 Sep 2022 (15:14 IST)
Updated Date: Thu, 15 Sep 2022 (15:18 IST)
ಕಟ್ಟಡವೊಂದರ ಹೊರಭಾಗದಲ್ಲಿ ಪಾರ್ಕ್ ಮಾಡಿದ್ದ ದುಬಾರಿ ಬೆಲೆಯ ಮರ್ಸಿಡೆಸ್ ಕಾರಿಗೆ ಬೆಂಕಿಯಿಟ್ಟ ಗಾರೆ ಕೆಲಸದ ಮೇಸ್ತ್ರಿ ಹಾಗೂ ಟೈಲ್ಸ್ ಪೂರೈಕೆದಾರನನ್ನು ನೋಯ್ಡಾ ಪೊಲೀಸರು ಬುಧವಾರ (ಸೆ. 14) ಬಂಧಿಸಿದ್ದಾರೆ.
ಈ ಘಟನೆ ನೋಯ್ಡಾದ ಸೆಕ್ಟರ್ 45ರಲ್ಲಿ ನಡೆದಿದ್ದು, ಮನೆ ಮಾಲೀಕ ಅಳವಡಿಸಿರುವ ಸಿಸಿಟಿವಿಯಲ್ಲಿ ಕಾರಿಗೆ ಬೆಂಕಿ ಇಡುವ ದೃಶ್ಯ ಸೆರೆಯಾಗಿದೆ.
ಆರೋಪಿಯನ್ನು ರಣವೀರ್ ಎಂದು ಗುರುತಿಸಲಾಗಿದೆ. ಗಾರೆ ಕೆಲಸದ ಮೇಸ್ತ್ರಿ ಹಾಗೂ ಟೈಲ್ಸ್ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ ರಣವೀರ್, ಕಾರು ಮಾಲೀಕನ ಮನೆಗೆ ಟೈಲ್ಸ್ ತಂದು ಅಳವಡಿಸಿದ. ಆದರೆ, ಸ್ವಲ್ಪ ಹಣವನ್ನು ನೀಡಿದ್ದ ಮಾಲೀಕ 2 ಲಕ್ಷ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದ. ಸಾಕಷ್ಟು ಬಾರಿ ಕೇಳಿದರು ಬಾಕಿ ಹಣ ಕೊಡದೇ ಸತಾಯಿಸಿದ್ದರಿಂದ ರೋಸಿ ಹೋದ ರಣವೀರ್, ಮನೆ ಮಾಲೀಕನ 1 ಕೋಟಿ ಮೌಲ್ಯದ ಮರ್ಸಿಡೆಸ್ ಕಾರಿಗೆ ಬೆಂಕಿಯಿಟ್ಟಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ.
ಹೆಲ್ಮೆಟ್ ಧರಿಸಿ ಬೈಕ್ ಸಮೀಪ ನಿಂತಿದ್ದ ರಣವೀರ್, ಆ ಪ್ರದೇಶದಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಕಾರಿನ ಬಳಿಕ ತೆರೆಳಿ ಕಾರಿನ ಮುಂಭಾಗಕ್ಕೆ ಬೆಂಕಿ ಹಚ್ಚಿ, ಬೈಕ್ ಏರಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುಡುವ ದ್ರವವನ್ನು ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಈ ಘಟನೆ ಭಾನುವಾರ (ಸೆ.11) ನಡೆದಿರುವುದಾಗಿ ತಿಳಿದುಬಂದಿದೆ. ಆ ಪ್ರದೇಶದಲ್ಲಿದ್ದ ಜನರು ಬೆಂಕಿ ಹೊತ್ತುಕೊಂಡಿರುವ ಕಾರನ್ನು ನೋಡಿ ಮಾಲೀಕರಿಗೆ ಎಚ್ಚರಿಕೆ ನೀಡಿದಾದರೂ ಅಷ್ಟರಲ್ಲಾಗಲೇ ಕಾರಿರ ತುಂಬಾ ಹಾನಿಯಾಗಿತ್ತು.