ಹುಬ್ಬಳ್ಳಿ: ಧರ್ಮಸ್ಥಳದ ಬುರುಡೆ ಪ್ರಕರಣದ ಹಿಂದೆ ಸಿಎಂ ಸಿದ್ದರಾಮಯ್ಯ ಪಾತ್ರವಿದ್ದು, ಹಿಂದೂ ಧರ್ಮ ಹಾಗೂ ದೇವಾಲಯಗಳ ವಿರುದ್ಧ ಅಪಪ್ರಚಾರ ಮಾಡಲು ಕಮ್ಯೂನಿಸ್ಟ್ ಮನಸ್ಥಿತಿಯ ನಗರ ನಕ್ಸಲರಿಗೆ ಸರ್ಕಾರದ ಬೆಂಬಲವಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವ್ಯಾರೂ ಸೌಜನ್ಯ ಪ್ರಕರಣ ಹಾಗೂ ಎಸ್‌ಟಿ ತನಿಖೆಯನ್ನು ವಿರೋಧಿಸಿಲ್ಲ. ಯಾರದ್ದೋ ಮಾತು ಕೇಳಿ ಎಸ್‌ಐಟಿ ತನಿಖೆಗೆ ಮುಖ್ಯಮಂತ್ರಿ ಕೊಡುತ್ತಾರೆ ಎನ್ನುವುದು ಆಕ್ಷೇಪ. ನಮಗೆ ವಿರೇಂದ್ರ ಹೆಗ್ಗಡೆ ಮುಖ್ಯ ಎನ್ನುವುದಕ್ಕಿಂತ, ಧರ್ಮಸ್ಥಳ–ಮಂಜುನಾಥ ಸ್ವಾಮಿ ಮುಖ್ಯ. ಇದೀಗ ಈ ಪ್ರಕರಣ ಹಿಂದೆ ಕಾಂಗ್ರೆಸ್ ಸರ್ಕಾರವಿದೆ ಎನ್ನುವುದು ಸಾಬೀತಾಗುತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ಹೊರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕೆಲವರು ಧರ್ಮಸ್ಥಳ ದೇವಸ್ಥಾನಕ್ಕೆ ಜೆಸಿಬಿ ನುಗ್ಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಡಿನಲ್ಲಿದ್ದ ಮತಾಂಧ, ಕಮ್ಯೂನಿಸ್ಟ್ ನಕ್ಸಲ್‌ಗಳನ್ನು ರೆಡ್ ಕಾರ್ಪೆಟ್ ಹಾಸಿ ನಾಡಿಗೆ ಕರೆಸಿಕೊಂಡ ಸಿದ್ದರಾಮಯ್ಯರೇ ಇದಕ್ಕೆಲ್ಲ ಕಾರಣ ಕರ್ತರು. ಕಾಡಲ್ಲಾದರೆ ಊಟ, ಬಟ್ಟೆಗೆ ಅಲೆಯಬೇಕಾಗಿತ್ತು, ಈಗ ಅವರಿಗೆ ನಗರದಲ್ಲಿ ಎಲ್ಲವೂ ಸಿಗುತ್ತಿದೆ. ಅವರೆಲ್ಲರಿಗೂ ಮಾಡಲು ಕೆಲಸವಿಲ್ಲದಿರುವುದರಿಂದ ಹಿಂದೂ ದೇವಸ್ಥಾನಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಈ ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದರು, ಮುಖ್ಯಮಂತ್ರಿ ಯಾವ ಹೇಳಿಕೆಯೂ ನೀಡುತ್ತಿಲ್ಲ. ಕಾಂಗ್ರೆಸ್‌ನಲ್ಲಿಯೇ ಹಿಂದೂ ವಿರೋಧಿ ಮತ್ತು ಹಿಂದೂ ಪರ ಗುಂಪುಗಳಿದ್ದು, ಪರಸ್ಪರರಲ್ಲಿ ಒಡಕು ಇದೆ. ದೇವಸ್ಥಾನದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ಗೆ ಜನರೇ ಪಾಠ ಕಲಿಸುತ್ತಾರೆ ಎಂದರು.