ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಇಂದು ಹಿಂದೂ ಪರ ಸಂಘಟನೆಗಳು ದಕ್ಷಿಣ ಕನ್ನಡ ಬಂದ್ ಗೆ ಕರೆ ನೀಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಎರಡು ವರ್ಷಗಳ ಹಿಂದೆ ಕೊಲೆಗೀಡಾಗಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರತೀಕಾರವಾಗಿ ಫಾಜಿಲ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಆರು ಆರೋಪಿಗಳ ಪೈಕಿ ಇದೇ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ.
ಇದೀಗ ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ನಡುರಸ್ತೆಯಲ್ಲೇ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದ ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದು ನಿನ್ನೆಯೇ ಆಸ್ಪತ್ರೆಯ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಂದು ಹಿಂದೂ ಸಂಘಟನೆಗಳು ದಕ್ಷಿಣ ಕನ್ನಡ ಬಂದ್ ಗೆ ಕರೆ ನೀಡಿವೆ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸುಹಾಸ್ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಇನ್ನು ಹಿಂದೂ ಕಾರ್ಯಕರ್ತನ ಹತ್ಯೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.