ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದವನನ್ನ ಕರೆದೊಯ್ದ ಬೆತ್ತಲುಗೊಳಿಸಿದ ಮಂಗಳಮುಖಿಯರು ಬೆದರಿಸಿ 4.30 ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಪ್ರಕಾಶಂ ಮೂಲದ ಶೇಖ್ ಶ್ರೀನಿವಾಸನ್ (49) ಹಣ ಕಳೆದುಕೊಂಡವರು. ಡಿಸೆಂಬರ್ 31ರಂದು ಬೆಳಗ್ಗಿನ ಜಾವ 1 ರಿಂದ 4:30ರ ನಡುವೆ ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲಿನಲ್ಲಿ ಘಟನೆ ನಡೆದಿದ್ದು, ಅಶೋಕ ನಗರ ಠಾಣೆಗೆ ಶ್ರೀನಿವಾಸನ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 30ರಂದು ಮೆಹಂದಿ ಪಬ್ ಗೆ ತೆರಳಿದ್ದ ಶ್ರೀನಿವಾಸನ್ ಬಳಿಕ ಊಟ ಮುಗಿಸಿ ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ಪರ್ಲ್ ಅಕಾಡೆಮಿ ಬಳಿ ಆಟೋದಲ್ಲಿ ಬಂದ ಇಬ್ಬರು ಮಂಗಳ ಮುಖಿಯರು ಕೈಸನ್ನೆ ಮಾಡಿ ಶ್ರೀನಿವಾಸನ್ ರನ್ನ ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಆಟೋದಲ್ಲಿ ಸುತ್ತಾಡಿಸಿ ಡಿಸೆಂಬರ್ 31ರ ಬೆಳಗ್ಗಿನ ಜಾವ ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲಿಗೆ ಕರೆತಂದಿದ್ದಾರೆ. ನಂತರ ಮತ್ತಿಬ್ಬರು ಮಂಗಳಮುಖಿಯರನ್ನ ಹೋಟೆಲಿಗೆ ಕರೆಸಿಕೊಂಡಿದ್ದಾರೆ. ಬಳಿಕ ಶ್ರೀನಿವಾಸನ್ ರನ್ನ ಬೆತ್ತಲುಗೊಳಿಸಿ ವೀಡಿಯೋ ಚಿತ್ರೀಕರಿಸಿಕೊಂಡು ವಾಚ್, ಉಂಗುರ, ಡೆಬಿಟ್ ಕಾರ್ಡ್, ಚಿನ್ನದ ಚೈನು, 40 ಸಾವಿರ ರೂನಗದು ಕಸಿದುಕೊಂಡಿದ್ದಾರೆ. ನಂತರ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಗೂಗಲ್ ಪೇ ಮೂಲಕ 1 ಲಕ್ಷ ಹಾಗೂ ಡೆಬಿಟ್ ಕಾರ್ಡ್ ಪಿನ್ ಪಡೆದು 2.90 ಲಕ್ಷ ವಿತ್ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೋಟೆಲ್ ಸಿಬ್ಬಂದಿಯ ಸಹಾಯದಿಂದ ಶ್ರೀನಿವಾಸನ್ ಅಶೋಕನಗರ ಠಾಣೆಗೆ ತೆರಳಿ ದೂರು ನೀಡಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.