Publish Date: Thu, 07 Mar 2019 (16:28 IST)
Updated Date: Thu, 07 Mar 2019 (16:30 IST)
ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸೋದು ಖಚಿತವಾಗಿದೆ. ಇನ್ನು ಕಾಂಗ್ರೆಸ್ ಟಿಕೆಟ್ ನಿರಾಕರಣೆ ಬೆನ್ನಲ್ಲೇ ಪಕ್ಷೇತರವಾಗಿ ಸ್ಪರ್ಧಿಸೋ ನಿಟ್ಟಿನಲ್ಲಿ ಸುಮಲತಾ ಮತ್ತಷ್ಟು ಆಕ್ಟೀವ್ ಆಗಿದ್ದು, ಏಕಾಂಗಿಯಾಗಿಯೇ ಕ್ಷೇತ್ರ ಪರ್ಯಟನೆ ಕೈಗೊಂಡಿದ್ದಾರೆ.
ಸುಮಲತಾ ಅಂಬರೀಶ್ ಇಂದು ಕೂಡ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ ಮಾಡಿದರು. ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಿನ್ನೆಯಷ್ಟೇ ಕೈ ಪಡೆ ಸುಮಲತಾಗೆ ಮಂಡ್ಯ ಕ್ಷೇತ್ರದ ಟಿಕೆಟ್ ನಿರಾಕರಣೆ ಮಾಡಿತ್ತು. ಕೈ ಟಿಕೆಟ್ ನಿರಾಕರಣೆ ನಡುವೆಯೇ ಫುಲ್ ಆಕ್ಟೀವ್ ಆಗಿರುವ ಸುಮಲತಾ ಕ್ಷೇತ್ರ ಪರ್ಯಟನೆ ಮುಂದುವರಿಸಿದ್ದು, ಹೋದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.
ಮಂಡ್ಯದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಾದ್ಯಂತ ಸುಮಲತಾ ಅಂಬರೀಷ್ ಮಿಂಚಿನ ಸಂಚಾರ ಮಾಡಿದ್ರು. ದಾರಿಯುದ್ದಕ್ಕೂ ಸುಮಲತಾಗೆ ಅಭೂತಪೂರ್ವ ಸ್ವಾಗತ ಕೋರಲಾಯ್ತು. ಎತ್ತಿನಗಾಡಿ, ತೆರೆದ ವಾಹನಗಳಲ್ಲಿ ಕೆಲವೊಂದು ಗ್ರಾಮಗಳಲ್ಲಿ ಮೆರವಣಿಗೆ ಕೂಡ ನಡೆಸಲಾಯ್ತು. ಇನ್ನು ಆಯಾ ಗ್ರಾಮಗಳ ಮಹಿಳೆಯರು, ಸುಮಲತಾಗೆ ತುಂಬಿದ ಕೊಡ, ಕಳಸಗಳೊಂದಿಗೆ ಪೂರ್ಣ ಕುಂಭ ಸ್ವಾಗತ ಕೋರಿದ್ರು. ಇದೇ ವೇಳೆ ಅಭಿಮಾನಿಗಳು ಮಂಡ್ಯ ಗೌಡ್ತಿಗೆ ಜೈ ಅನ್ನೋ ಮೂಲಕ ಸುಮಲತಾಗೆ ಮಂಡ್ಯ ಗೌಡ್ತಿ ಬಿರುದು ನೀಡಿದರು.