ಬೆಳಗಾವಿ: ಪ್ರಿಯಾಂಕ ಗಾಂಧಿ ಮೇಲ್ನೋಟಕ್ಕೆ ಮೆತ್ತಗೆ ಕಾಣಬಹುದು. ಮುಟ್ಟಿ ನೋಡಿದ್ರೆ ಗೊತ್ತಾಗುತ್ತದೆ ಎಂಥಾ ಗಟ್ಟಿ ಮಹಿಳೆ ಎಂದು.. ಹೀಗಂತ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಿಯಾಂಕ ಗಾಂಧಿ ವಾದ್ರಾ ಗುಣಗಾನ ಮಾಡಿದರು. ಅಲ್ಲದೆ, ಬಿಜೆಪಿ, ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕ ಗಾಂಧಿ ವಾದ್ರಾ. ಅವರು ನೋಡಲು ಸ್ವಲ್ಪ ಮೆತ್ತಗೆ ಕಾಣಬಹುದು. ಆದರೆ ಮುಟ್ಟಿ ನೋಡಿದ್ರೆ ಗೊತ್ತಾಗುತ್ತದೆ ಎಂಥಾ ಗಟ್ಟಿ ಹೆಣ್ಣು ಮಗಳು ಅಂತ. ತಂದೆ ಕಳೆದುಕೊಂಡು ಬೆಳೆದವರು ಪ್ರಿಯಾಂಕ, ಆದರೆ ಎಂದಿಗೂ ಆ ಕೊರತೆ ತೋರಿಸಿಕೊಂಡಿಲ್ಲ. ಆದರೆ ಮೋದಿ, ಅಮಿತ್ ಶಾ ಅವರ ಚಮಚಾಗಳು ಪ್ರಿಯಾಂಕರನ್ನು ಬೈತಾರೆ. ಮೊದಲು ಅವರು ಮಾಡಿರುವ ಸಾಧನೆ ಏನೆಂದು ತೋರಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಗಾಂಧಿ ಎಂದಿಗೋ ದೇಶದ ಪ್ರಧಾನಿ ಆಗಬೇಕಿತ್ತು, ಆದರೆ ಮನಮೋಹನ್ ಸಿಂಗ್ ಅವರಿಗೆ ಅವರು ಪದವಿ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಕೃಪೆಯಿಂದ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆಯವರೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಲ್ಲದೆ, ಗಾಂಧಿ ಪ್ರತಿಮೆಯನ್ನೂ ಉದ್ಘಾಟಿಸಿದ್ದಾರೆ.