ಉಡುಪಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಅಶ್ಲೀಲ ಪದ ಬಳಕೆ ಸಂಬಂಧ ವಶಕ್ಕೆ ಪಡೆದಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಬಿ ಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಈ ಸಂಬಂಧ ಅವರನ್ನು ಇಂದು ವಶಕ್ಕೆ ಪಡೆಯಲಾಯಿತು.
ಇಂದು ಬೆಳಗ್ಗೆ ಮಹೇಶ್ ಶೆಟ್ಟಿಯನ್ನು ಉಜಿರೆಯ ಅವರ ನಿವಾಸದಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆತಂದಿದ್ದರು. ವೈದ್ಯಕೀಯ ಪರೀಕ್ಷೆ ಬಳಿ ಅವರನ್ನು ಬ್ರಹ್ಮಾವರ ತಾಲ್ಲೂಕು ಕೋರ್ಟ್‌ಗೆ ಹಾಜರು ಪಡಿಸಲಾಯಿತು.
ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ನೀಡಲು ನಿರಾಕರಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಹೇಶ್ ಶೆಟ್ಟಿಯ ಜಾಮೀನು ಅರ್ಜಿಯ ವಿಚಾರಣೆ ಅಗಸ್ಟ್ 23ಕ್ಕೆ ನಡೆಯಲಿದೆ.
ಇದು ಜಾಮೀನು ರಹಿತ ಅಪರಾಧವಾಗಿದೆ ಮತ್ತು ವಿಚಾರಣೆಗೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದ ಎರಡು ಪೊಲೀಸ್ ನೋಟಿಸ್‌ಗಳನ್ನು ತಿಮರೋಡಿ ನಿರ್ಲಕ್ಷಿಸಿದ್ದಾರೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರು ಹೇಳಿದ್ದಾರೆ.
ತಿಮರೋಡಿ ಅವರ ಹೇಳಿಕೆಗಳು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಮತ್ತು ಭಾವನೆಗಳಿಗೆ ನೋವುಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.