ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬಳಿಕ ಇದೀಗ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಪೊಲೀಸರು ಯೂಟ್ಯೂಬರ್ ಸಮೀರ್ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ.
ಧರ್ಮಸ್ಥಳ ವಿಚಾರ ಈಗ ಭಾರೀ ಸದ್ದು ಮಾಡುತ್ತಿದೆ. ಇಂದು ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರೀ ಹೇಳಿಕೆ ನೀಡಿದ ಆರೋಪದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದರು.
ಇದೀಗ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್ ನಲ್ಲಿ ವಿಡಿಯೋ ಹಂಚಿಕೊಂಡು ವೈರಲ್ ಆಗಿದ್ದ ಸಮೀರ್ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಸಮೀರ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿರುವ ಸಮೀರ್ ಮನೆ ಬಳಿ ಪೊಲೀಸರು ಬಂದಿದ್ದು ಸದ್ಯದಲ್ಲೇ ಬಂಧಿಸುವ ಸಾಧ್ಯತೆಯಿದೆ. ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ್ದ ಸಮೀರ್ ಧರ್ಮಸ್ಥಳದ ಬಗ್ಗೆ ನೇರಾನೇರ ಆರೋಪ ಮಾಡಿದ್ದರು. ಅವರ ವಿಡಿಯೋಗಳು ರಾತ್ರೋ ರಾತ್ರಿ ವೈರಲ್ ಆಗಿತ್ತು.