Select Your Language

Notifications

webdunia
webdunia
webdunia
webdunia

ಮಡಿಕೇರಿ ನಗರದ ಜನರ ಕುತೂಹಲದ ಕೇಂದ್ರ ನಕಲಿ ಅಣೆಕಟ್ಟು ನಿರ್ಮಾಣದ ಯಶೋಗಾಥೆ

ಮಡಿಕೇರಿ ನಗರದ ಜನರ ಕುತೂಹಲದ ಕೇಂದ್ರ ನಕಲಿ ಅಣೆಕಟ್ಟು ನಿರ್ಮಾಣದ ಯಶೋಗಾಥೆ
bangalore , ಗುರುವಾರ, 3 ಮಾರ್ಚ್ 2022 (20:10 IST)
ಮಂಜಿನ‌ ನಗರಿ ಖ್ಯಾತಿಯ ಮಡಿಕೇರಿಯ ಹೃದಯಭಾಗದಲ್ಲಿ ಅಜ್ಜಮಾಡ ದೇವಯ್ಯ ಸರ್ಕಲ್ ( ಹಳೆ ಖಾಸಗಿ ಬಸ್ ನಿಲ್ದಾಣ) ನಲ್ಲಿ ತಲೆ ಎತ್ತಿ ನಿಂತಿರುವ ಬೃಹತ್ ಗೋಡೆ ಕಂಡಾಗ ಎಲ್ಲರ ಮನದಲ್ಲಿ ಮೂಡುವ ಗೊಂದಲದ ಪ್ರಶ್ನೆ ಇದು ಏನು? ಉತ್ತರ ಯಾರ ಬಳಿಯೂ ಇಲ್ಲ .
ನಾವೆಲ್ಲಾ ಶಾಲಾ ಬಾಲಕರಾಗಿದ್ದಾಗ ನಮ್ಮ ನಮ್ಮಲ್ಲೇ  ಪ್ರಶ್ನೆ ಮಾಡುತ್ತಿದ್ದ ಗಾದೆಗಳು ನೆನಪಾಗುತ್ತಿದೆ 
ಊರುಂಟು ಜನರಿಲ್ಲ.ನದಿಯುಂಟು ನೀರಿಲ್ಲ.ರಸ್ತೆಯುಂಟು ವಾಹನವಿಲ್ಲ. ಹಾಗಾದರೆ ನಾನು ಯಾರು? ಎಲ್ಲರೂ ಕಣ್ಣರಳಿಸಿ ಪ್ರಶ್ನೆ ಮಾಡಿದವನ ಮೊಗವನ್ನೇ ಕುತೂಹಲದಿಂದ ವೀಕ್ಷಿಸುತ್ತಿದ್ದೆವು. ಆತ ಉತ್ತರ ಭೂಪಟ ವೆಂದಾಗ ನಮಗೂ ಉತ್ತರ ಗೊತ್ತಾಗಿದೆ ಎಂದು ಸಂಭ್ರಮಿಸುತ್ತಿದ್ದೆವು .
ಹಾಗೆನೆ ಅಕ್ಷರವುಂಟು ಪುಸ್ತಕವಲ್ಲ,ಸಿಂಹವುಂಟು ಕಾಡಲ್ಲ,ದುಂಡಗೆ ಇದೆ, ವೃತ್ತವಲ್ಲಾ ,ಹಾಗಾದರೆ ನಾನು ಯಾರು ? ಉತ್ತರ ನಾಣ್ಯ ,ಹೀಗೆ ಒಬ್ಬೊಬ್ಬರು ವಿವರಿಸುತ್ತಿದ್ದ ಗಾದೆಗಳು ,ಅದರ ಉತ್ತರಗಳು ನಮ್ಮ ಮನದಲ್ಲಿ ಆತ ಜಗತ್ತಿನ ಅತ್ಯಂತ ಶ್ರೇಷ್ಠ ಜ್ಞಾನಿ ಎಂಬ ಭಾವನೆ ಮೂಡುತ್ತಿತ್ತು.
ಈಗ ವಿಷಯಕ್ಕೆ ಬರೋಣ .ಮಡಿಕೇರಿಯಲ್ಲಿ ನಿರ್ಮಿತವಾಗಿರುವ ಬಹುಕೋಟಿ ವೆಚ್ಚದ ಕಾಮಗಾರಿಯನ್ನು ಕಂಡಾಗ ಅದೇ ಗತಕಾಲದ  ಪ್ರಶ್ನೆ ಕೇಳುವಂತೆ ಭಾಸವಾಗುತ್ತದೆ. ಸಿಮೆಂಟ್ ಕಾಂಕ್ರೀಟ್ ನಿಂದ ನಿರ್ಮಿತವಾಗಿದೆ .ಕಿಟಕಿ ಬಾಗಿಲುಗಳು ಇಲ್ಲದಿರುವುದರಿಂದ ಕಟ್ಟಡವಲ್ಲ .ಸಾಲಾಗಿ ಹತ್ತು ಕ್ರಷ್ ಗೇಟ್ ಗಳಿವೆ .ನೀರು ಬಿಡಲು ಸಾಧ್ಯವಿಲ್ಲದಿರುವುದರಿಂದ ಅಣೆಕಟ್ಟು ( ಡ್ಯಾಮ್) ಅಲ್ಲ .ಯಾವುದೇ ಹೆಣವನ್ನು ಅಲ್ಲಿ ಹೂಳದೆ ಇರುವುದರಿಂದ ಗೋರಿಯಲ್ಲಾ .ಯಾವುದೇ ಐತಿಹಾಸಿಕ ಘಟನೆ ಆ ಪ್ರದೇಶದಲ್ಲಿ ನಡೆಯದೆ ಇರುವುದರಿಂದ ಸ್ಮಾರಕವಲ್ಲಾ ? ಹಾಗಾದರೆ ಇದು ಏನು? ಸದ್ಯಕ್ಕೆ ನದಿ ಇಲ್ಲದೆ ಕಟ್ಟಿದ ಡ್ಯಾಮ್ ಮಾಡೆಲ್ ಎಂದು ಉಲ್ಲೇಖಿಸುತ್ತಿದ್ದೇನೆ.
2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡಿರದ  ಭೀಕರ ಜಲಪ್ರಳಯ ಸಂಭವಿಸಿ ಅನೇಕ ಸಾವು ನೋವುಗಳಾಗಿ ಅಲ್ಲಲ್ಲಿ ಭೂ ಕುಸಿತವಾಗಿರುತ್ತದೆ .
ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಹಿಂಬದಿಯ ಬರೆ ಕುಸಿದು ಬಸ್ ನಿಲ್ದಾಣ ಅಸುರಕ್ಷಿತ ಎಂದು ತಿರ್ಮಾನಿಸಿ ಕಟ್ಟಡವನ್ನು ಕೆಡವಲಾಗುತ್ತದೆ .ಆ ಸಂಧರ್ಭದಲ್ಲಿ ತಜ್ಞರ ಸಲಹೆ ಸೂಚನೆ ಮೇರೆಗೆ ,ಮಡಿಕೇರಿಯ ಕೆಲವು ಪ್ರಜ್ಞಾವಂತ ನಾಗರೀಕರ ಸಲಹೆಯಂತೆ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಮಡಿಕೇರಿ ಸ್ಕೈರ್ ಎಂಬ ಯೋಜನೆ ಸಿದ್ದವಾಗುತ್ತದೆ .ಸದರಿ ಅಪಾಯಕಾರಿ ಪ್ರದೇಶಕ್ಕೆ ತಡೆ ಗೋಡೆ ನಿರ್ಮಾಣ ಮತ್ತು ಕೆಲವೊಂದು ಮಾಹಿತಿ ನೀಡುವ  ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ವಿಭಿನ್ನ ರೀತಿಯಲ್ಲಿ ಮಡಿಕೇರಿ ಸ್ಕೇರ್ ನಿರ್ಮಾಣಕ್ಕೆ ಮಾತು ಕತೆ ನಡೆಯುತ್ತದೆ.
 .ಆದರೆ ಆ ಸಂಧರ್ಭದಲ್ಲಿ ಮಡಿಕೇರಿ ನಗರದ ಜನತೆಯ ಅಭಿಪ್ರಾಯವನ್ನು ಕಡೆಗಣಿಸಿ ತಡೆಗೋಡೆ ನಿರ್ಮಾಣಕ್ಕೆ ಇಲಾಖೆ ಮುಂದಾಗುತ್ತದೆ .ದೊಡ್ಡ ದೊಡ್ಡ ಯಂತ್ರಗಳನ್ನು ತರಿಸಿ ಗುಂಡಿತೋಡಿ ಅಡಿಪಾಯ ಹಾಕಲಾಗುತ್ತದೆ .ಕಾಮಗಾರಿ ನಡೆಯುವಾಗಲೇ ಮತ್ತೊಮ್ಮೆ ಸುರಿದ ಮಳೆಗೆ ಬರೆ ಪುನಃ ಜರಿದು ತೋಡಿದ ಗುಂಡಿಯನ್ನು ಪ್ರಕೃತಿಯೇ ಮುಚ್ಚುತ್ತದೆ .ಅದರ ಮೇಲೆಯೇ ಕಾಂಕ್ರಿಟ್ ಹಾಕಿ 
ಒಂದು ಕೋಟಿ ರೂಗಳನ್ನು ಅಲ್ಲಿಗೆ ಸರಿದೂಗಿಸಲಾಗುತ್ತದೆ . ಅನುದಾನ ಯಾವುದು .ಉದ್ದೇಶ ಏನು ,ಪ್ರಯೋಜನವೇನು , ಎಂಬುದು ಮಡಿಕೇರಿ ನಾಗರಿಕನ ಅರಿವಿಗೆ ಬರವುದಿಲ್ಲ . ಒಂದು ಕೋಟಿಯಲ್ಲಿ ಮಡಿಕೇರಿ ಸ್ವೇರ್ ನಿರ್ಮಾಣವಾಗುತ್ತದೆ ಎಂದು ಕಾಯುತ್ತಿದ್ದ ಜನರಿಗೆ ಎಲ್ಲವೂ ಅಗೋಚರ ಮತ್ತು ಅಸ್ಪಷ್ಟ.
ನಂತರ 2019 -2020 ಸಾಲಿನ ಮಳೆ ಹಾನಿಯ ವಿವರಗಳನ್ನು ನೀಡಲು ಕೊಡಗು ಜಿಲ್ಲಾಧಿಕಾರಿಗಳು ಮಡಿಕೇರಿ ನಗರ ಸಭೆಗೆ ದಿನಾಂಕ 31-12-2020 ರಂದು ಮಡಕೇರಿ ನಗರ ವ್ಯಾಪ್ತಿಯಲ್ಲಿ 2020 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಸುರಿದ ಮಳೆಯಿಂದ ಹಾನಿಯಾದ ರಸ್ತೆಗಳು ,ಸೇತುವೆಗಳು,
ತಡೆಗೋಡೆ ನಿರ್ಮಾಣ ,ಸರ್ಕಾರಿ ಕಟ್ಟಡಗಳ ದುರಸ್ತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಕ್ಕೆ ಸಂಭಂದಿಸಿದ ಕೆಲಸಗಳು ,ಹಾನಿಯಾದ ಕಾಲುವೆಗಳ ದುರಸ್ತಿ ಹೀಗೆ ಮಳೆಯಿಂದ ಹಾನಿಯಾದ ಪ್ರದೇಶಗಳ ಪರಿಶೀಲನೆಯೊಂದಿಗೆ ಪ್ರಸಾವನೆಯನ್ನು ಸಲ್ಲಿಸುವಂತೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುತ್ತಾರೆ. ನಗರ ಸಭೆಯ  ಅಧಿಕಾರಿಗಳು ಸಿಬ್ಬಂದಿಗಳು ಸುಧೀರ್ಘ ಅವಧಿ ಸ್ಥಳ ಪರಿಶೀಲನೆ ನಡೆಸಿ ನಗರದ ಸುಬ್ರಮಣ್ಯನಗರ ,ವಿದ್ಯಾ ನಗರ ,ಡೈರಿ ಫಾರಂ ,ಅಜಾದ್ ನಗರ  ಮಲ್ಲಿಕಾರ್ಜುನ ನಗರ ,ಪುಟಾಣಿ ನಗರ ,ಕನ್ನಂಡ ಬಾಣೆ ,ದೇಚೂರು ,ಡಿ ಎ ಆರ್ ವಸತಿ ಗೃಹ ,ಹೊಸ ಬಡಾವಣೆ ,ರಾಣಿ ಪೇಟೆ ,ಭಗವತಿ ನಗರ ಹೀಗೆ ನಗರದಾದ್ಯಂತ ಸ್ಥಳ ಪರಿಶೀಲನೆ ನಡೆಸಿ ಸುಮಾರು 79 ಕ್ಕೂ ಅಧಿಕ ಕಾಮಗಾರಿಗೆ  ಸಂಭಂದಿಸಿದಂತೆ ಮೂವತ್ತು ಕೋಟಿ ,ಮೂವತ್ತೇಳು ಲಕ್ಷದ,ಅರುವತ್ತೈದು ಸಾವಿರ ರೂಗಳ ಪ್ರಸ್ತಾವನೆಯನ್ನು ಮಾನ್ಯ ಕೊಡಗು ಜಿಲ್ಲಾಧಿಕಾರಿಗಳವರಿಗೆ ದಿನಾಂಕ 1-4-2021 ರಂದು  ನಷ್ಟದ ವಿವರಗಳೊಂದಿಗೆ ಸಲ್ಲಿಸುತ್ತಾರೆ .ಜಿಲ್ಲಾಧಿಕಾರಿಗಳು ಇದನ್ನು ಜಿಲ್ಲೆಯ ಇತರ ಭಾಗಗಳಿಂದ ಬಂದ ಪ್ರಸ್ತಾವನೆಯೊಂದಿಗರ ಸರ್ಕಾರಕ್ಕೆ ಕಳುಹಿಸುತ್ತಾರೆ .
ಇದಕ್ಕೆ ಪ್ರತಿಯಾಗಿ ಸರ್ಕಾರ 2020-21 ರ ಮಳೆ ಹಾನಿ ವಿಶೇಷ ಪರಿಹಾರ ಕಾಮಗಾರಿ ಎಂದು ಮಡಿಕೇರಿ ನಗರಕ್ಕೆ ಆರು ಕೋಟಿ  ನಲವತ್ತಾರು ಲಕ್ಷ ರೂಗಳನ್ನು ಬಿಡುಗಡೆ ಮಾಡಿತು .
ಸಹಜವಾಗಿ ,ನಿಯಮಾನುಸಾರವಾಗಿ ಈ ಹಣ ಭಾರಿ ಮಳೆಗೆ ಹಾನಿಯಾದ ಕಾಮಗಾರಿಗೆ ಆದ್ಯತೆ ಮೇರೆಗೆ ಬಳಕೆಯಾಗಬೇಕಿತ್ತು .
ಆದರೆ ಯಾರ ಗಮನಕ್ಕೂ ಬಾರದೆ ನಕಲಿ ಅಣೆಕಟ್ಟಿಗೆ 2 ಕೋಟಿ 96 ಲಕ್ಷ,2017-18ರಲ್ಲಿ ಎಸ್ ಪಿ ಬಂಗಲೆಯ ಮುಂಭಾಗದಲ್ಲಿ ರಸ್ತೆ ಅಗಲೀಕರಣ ನಡೆದಾಗ ಆ ಭಾಗದಲ್ಲಿದ್ದ ಅಪಾಯಕಾರಿಯಲ್ಲದ ಪ್ರದೇಶದ ತಡೆಗೋಡೆಗೆ  1 ಕೋಟಿ 72 ಲಕ್ಷದ 99 ಸಾವಿರ ರೂಗಳು ಸಾಯಿ ಮೈದಾನದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 1 ಕೋಟಿ 45 ಲಕ್ಷ ರೂಗಳು,ಎಲ್ ಐ ಸಿ ಕಛೇರಿ ಮುಂಬಾಗ ತಡೆಗೋಡೆ  9 ಲಕ್ಷದ 85 ಸಾವಿರ ರೂಗಳು ಹೀಗೆ ಸಾರ್ವಜನಿಕರು ಗಮನ ನೀಡದ ,ಪ್ರಶ್ನೆ ಮಾಡದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ ಹಣ ಬಿಡುಗಡೆಮಾಡಲಾಯಿತು. ಗುತ್ತಿಗೆದಾರರು ಸಂಭಂದ ಪಟ್ಟವರ ತಿಜೋರಿ ಭದ್ರ ಪಡಿಸಿ ಕೆಲಸ ಮುಗಿಸಿದರು. ಕೇವಲ  22 ಲಕ್ಷ ರೂಗಳು ಮಾತ್ರ ನೈಜ ಕಾರ್ಯಕ್ಕೆ ಅಂದರೆ ಮಳೆಯಿಂದ ಹಾನಿಯಾದ ರಸ್ತೆಗಳ ಗುಂಡಿ ಮುಚ್ಚಲು ಬಳಕೆಯಾಯಿತು.( ಗುಂಡಿ ಮುಚ್ಚಿದರೋ ಅಥವಾ ತಮ್ಮ ಹುಂಡಿ  ತುಂಬಿಸಿದರೋ ಆ ಓಂಕಾರೇಶ್ವರನೇ ಬಲ್ಲ).
ಅಲ್ಲಿಗೆ ಭಾರಿ ಮಳೆಗೆ ನಷ್ಟ ಅನುಭವಿಸಿದವರ ಕಥೆ ಮುಗಿಯಿತು .ತಮ್ಮ ಮನೆಗೆ ಹಾನಿಯಾಗಿದೆ ತಡೆಗೋಡೆಗೆ ಸರ್ಕಾರದಿಂದ ಹಣ ಬರುತ್ತದೆ ಎಂದು ಕಾಯುತ್ತಿದ್ದವರ ಅರಿವಿಗೆ ಬಾರದ ಹಾಗೆ ನಾಜೂಕಾಗಿ ಮಳೆಹಾನಿ ಪರಿಹಾರ ಸಂಭಂದ ಪಡದ ಯಾವುದೋ ಕಾರ್ಯಕ್ಕೆ ಬಳಕೆಯಾಯಿತು. ದಿನಂಪ್ರತಿ ಅದೇ ರಸ್ತೆಯಲ್ಲಿ ಒಡಾಡುತ್ತಿದ್ದರೂ ತಮ್ಮ ಮನೆ ,ರಸ್ತೆಯ ರಕ್ಷಣೆಗೆ ಬಂದ ಅನುದಾನವನ್ನು ಈ ನಕಲಿ ಅಣೆಕಟ್ಟು ನುಂಗಿ ಹಾಕಿದೆ ಎಂಬುದು ಮಡಿಕೇರಿ ನಗರದ ಮುಗ್ದ ನಾಗರೀಕರ ಅರಿವಿಗೆ ಬರಲಿಲ್ಲ.ಒಟ್ಟಿನಲ್ಲಿ ಯಾರೋ ಕೆಲವರ ಕಮಿಷನ್ ಧಂಧೆಯ ಸ್ಮಾರಕ ನಗರದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿದೆ.
ಕೊನೆಹನಿ ಬರೊಬ್ಬರಿ ಮೂರು ಕೋಟಿ ತೊಂಬತ್ತಾರು ಲಕ್ಷ ರೂಗಳ ಮಡಿಕೇರಿ ನಗರದ ನಾಗರೀಕರ ಸಮಸ್ಯೆ ಗಳ ಪರಿಹಾರಕ್ಕೆ ಬಿಡುಗಡೆಯಾದ ಹಣವನ್ನು ಈ ಅಣೆ ಕಟ್ಟು ನುಂಗಿ ಹಾಕಿದೆ. ಅಚ್ಚರಿಯ ವಿಚಾರವೆಂದರೆ ಇತ್ತೀಚೆಗೆ   ಮಾನ್ಯ ಶಾಸಕರು ನಗರದ ಪ್ರಥಮ ಪ್ರಜೆ,ದ್ವಿತೀಯ ಪ್ರಜೆ ಹಾಗೂ ತೃತೀಯ ಪ್ರಜೆಗಳೊಂದಿಗೆ ನಗರ ಪ್ರದಕ್ಷಿಣೆ ಹಾಕಿ ತೋಡು.ಮೋರಿ.ಹಳ್ಳ,
ಕೊಳ್ಳ ಗಳನ್ನು ವೀಕ್ಷಣೆ ಮಾಡಿದರು .ಆದರೆ ಈ ಬೃಹತ್ ನಿರ್ಮಾಣದ ಕಟ್ಟೆ ಮಾತ್ರ ಅವರುಗಳ ಕಣ್ಣಿಗೆ ಕಾಣಿಸದೇ ಇರುವುದು  ವಿಶ್ವದ ಎಂಟನೆಯ ಅದ್ಬುತವಾಗಿದೆ.
( ಯಾರಿಗೆಲ್ಲಾ ಎಷ್ಟೆಷ್ಟು ಪರ್ಸೆಂಟ್ ಕಮಿಷನ್ ಹೋಗಿದೆ ಎಂಬುದು ಅವರಪ್ಪರಾಣೆ ನನಗೆ ತಿಳಿದಿಲ್ಲ)

Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೆ ನಿಲ್ದಾಣದಲ್ಲಿ 16 ಕೋಟಿ ಮೌಲ್ಯದ 32 ಕೆ.ಜಿ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು