ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಇವರು ಬಿಹಾರದ ಸರನ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಒಂದು ವೇಳೆ ರೋಹಿಣಿ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಲ್ಲಿ ಯಾದವ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಾಲ್ಕನೇ ಕುಡಿ ರಾಜಕೀಯಕ್ಕೆ ಪ್ರವೇಶಿಸುತ್ತದೆ.
ಇನ್ನೂ ರೋಹಿಣಿ ಆಚಾರ್ಯ ಅವರ ಸಹೋದರ ತೇಜಸ್ವಿ ಯಾದವ್ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ಅಧ್ಯಕ್ಷರಾಗಿದ್ದಾರೆ. ಆಕೆಯ ಇತರ ಇಬ್ಬರು ಒಡಹುಟ್ಟಿದವರಾದ ತೇಜ್ ಪ್ರತಾಪ್ ಯಾದವ್ ಮತ್ತು ಮಿಶಾ ಭಾರತಿ ಕ್ರಮವಾಗಿ ಬಿಹಾರ ವಿಧಾನಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದಾರೆ.
ರೋಹಿಣಿ ಆಚಾರ್ಯ ಅವರು ವೈದ್ಯರಾಗಿದ್ದಾರೆ. 2002 ರಲ್ಲಿ, ಅವರು ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ನಿವೃತ್ತ ಆದಾಯ ತೆರಿಗೆ ಅಧಿಕಾರಿ ಮತ್ತು ಲಾಲು ಯಾದವ್ ಅವರ ಸ್ನೇಹಿತ ರೈ ರಣವಿಜಯ್ ಸಿಂಗ್ ಅವರ ಮಗ ಸಮರೇಶ್ ಸಿಂಗ್ ಅವರನ್ನು ವಿವಾಹವಾದರು. ಕಳೆದ ಎರಡು ದಶಕಗಳಿಂದ ಈ ದಂಪತಿ ಸಿಂಗಾಪುರ ಮತ್ತು ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
2022ರಲ್ಲಿ ಮೂತ್ರಪಿಂಡದ ಕಾಯಿಲೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಪುತ್ರಿ ರೋಹಿಣಿ ಕಿಡ್ನಿ ದಾನ ಮಾಡಿ ಅಪ್ಪನ ಜೀವ ಉಳಿಸಿದ್ದರು. ಈ ವಿಚಾರ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.