ಸರಕಾರದ ಬೆಳಕು ಕಾರ್ಯಕ್ರಮದ ಮೂಲಕ 1,44,000 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಇಂಧನ ಇಲಾಖೆ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಆಯೋಜಿಸಿರುವ ಬೆಳಗಾವಿ ಜಿಲ್ಲೆಯ ದಾಸ್ತಿಕೊಪ್ಪ ಗ್ರಾಮದಲ್ಲಿ ರಾಜ್ಯ ಮಟ್ಟದ ಬೆಳಕು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರ ಬಡವರ ಮನೆಗೆ ವಿದ್ಯುತ್, ರೈತರಿಗೆ ಪಂಪ್ ಸೆಟ್ ವಿದ್ಯುತ್ ನೀಡಿದೆ. ಬಡವರ ಕೆಲಸವನ್ನು ಅಂತಃಕರಣದಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರಿಗೆ, ಕಾರ್ಖಾನೆಗಳು, ಗ್ರಾಮೀಣ ಬದುಕಿಗೂ ಈಗ ವಿದ್ಯುಚ್ಛಕ್ತಿ ಅನಿವಾರ್ಯವಾಗಿದೆ. ಸಿಂಗಲ್ ಫೇಸ್ ವಿದ್ಯುತ್ ನ್ನು 24×7 ನೀಡಿ, 3 ಫೇಸ್ ವಿದ್ಯುತ್ ನ್ನು ನಿರಂತರವಾಗಿ ಎಲ್ಲ ಜಿಲ್ಲೆಗಳಲ್ಲಿ 7 ತಾಸು ಕೊಡುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡಿದೆ. 24 ಗಂಟೆಯೂ ಟಿಸಿಯನ್ನು ಕೊಡುವ ವ್ಯವಸ್ಥೆ ಈಗ ಆಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಪುನಶ್ಚೇತನ.
ಭ್ರಷ್ಟಾಚಾರವಿಲ್ಲದೇ ನಿಗದಿತ ಸಮಯದಲ್ಲಿ ಬಡವರ ಪರ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರ ತೊಡೆಯುವುದು ಸರಕಾರದ ಸಂಕಲ್ಪ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಪುನಶ್ಚೇತನಕ್ಕಾಗಿ ₹ 1900 ಕೋಟಿ ಕಂಪನಿಗೆ ಕೊಟ್ಟಿದ್ದ ಸಾಲವನ್ನು ಸರಕಾರದ ಶೇರ್ ಆಗಿ ಪರಿವರ್ತಿಸಿ ಆ ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿದೆ. ಉತ್ತರ ಕರ್ನಾಟಕದ ವಿದ್ಯುಚ್ಛಕ್ತಿಯ ಮೂಲಸೌಲಭ್ಯ ವೃದ್ಧಿಗೊಳಿಸಲಾಗುವುದು. ಕೇಂದ್ರ ಸರಕಾರದ ವಿದ್ಯುಚ್ಛಕ್ತಿ ಕಂಪನಿಯ ಪುನಶ್ಚೇತನಕ್ಕಾಗಿ ನೀಡುವ ₹ 1500 ಕೋಟಿ ಅನುದಾನವನ್ನು ಹೆಸ್ಕಾಂಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಸರಕಾರದ ಸೇವೆಗಳು :
ಕರ್ನಾಟಕದ ಪ್ರತಿ ಕುಟುಂಬ ಸುಖೀ ಕುಟುಂಬವಾಗಬೇಕೆಂಬುದು ಸರಕಾರದ ಗುರಿ. ಸರಕಾರದ ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗಬೇಕು. ಜನವರಿ 26ರಂದು ಗ್ರಾಮ ಪಂಚಾಯತ್ ಗಳಲ್ಲೂ ಸರಕಾರಿ ಸೇವೆಗಳು ಲಭ್ಯವಾಗಲಿದೆ. ಆದಾಯ, ಜಾತಿ ಪ್ರಮಾಣಪತ್ರಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ದೊರೆಯಲಿದೆ. ಆಡಳಿತದ ವ್ಯವಸ್ಥೆಯ ಬದಲಾವಣೆಯ ಮುಖಾಂತರ ಜನರಿಗೆ ಸರಕಾರದ ಸೇವೆಗಳು ಮುಟ್ಟಬೇಕೆನ್ನುವ ಸರಕಾರದ ಸಂಕಲ್ಪ. ಭ್ರಷ್ಟಾಚಾರವನ್ನು ಪ್ರೋತ್ಸಾಹಿಸದೆ ನ್ಯಾಯಸಮ್ಮತವಾಗಿ ಸರಕಾರದ ಸೌಲಭ್ಯವನ್ನು ಪಡೆಯುವ ಸಂಕಲ್ಪವನ್ನು ಸಾರ್ವಜನಿಕರು ಮಾಡಬೇಕು ಎಂದರು.
ನಮ್ಮ ಸರಕಾರ ರೈತಪರವಾದ ಸರಕಾರ. ಮುಖ್ಯಮಂತ್ರಿಯಾಗಿ ಮೊದಲು ರೈತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ ₹ 6800 ರಾಜ್ಯ ಸರಕಾರವು ₹ 6,800 ಸೇರಿಸಿ, ₹ 13600 ಪರಿಹಾರ ನೀಡಲಾಗುವುದು. ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರಿಗೆ ₹ 13,500 ಗೆ ₹ 11,500 ಹೆಚ್ಚುವರಿಯಾಗಿ ನೀಡಿ ಒಟ್ಟು ಪ್ರತಿ ಹೆಕ್ಟೇರ್ಗೆ ₹ 25,000 ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ ಗೆ ₹ 18,000 ಪರಿಹಾರದ ಜೊತೆಗೆ ರಾಜ್ಯ ಸರಕಾರ ₹ 10,000 ಸೇರಿಸಿ, ಒಟ್ಟು ₹ 28,000 ಪರಿಹಾರ ನೀಡಲಾಗುವುದು. ಮಳೆಹಾನಿಯಾದ ಒಂದು ತಿಂಗಳೊಳಗೆ ಸರ್ವೇಯಾದ 48 ಗಂಟೆಯೊಳಗೆ ರೈತರ ಖಾತೆಗೆ ಪರಿಹಾರ ತಲುಪಿದೆ. 10 ಲಕ್ಷ ಹೆಕ್ಟೇರೆಗ ₹ 969 ಕೋಟಿ ಜಮೆಯಾಗಿದೆ. ರೈತಪರ ಸರಕಾರ, ರೈತರಿಗೆ ಸ್ಪಂದಿಸುವ ಜೀವಂತಿಕೆಯ ಸರಕಾರ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಸಂಕಲ್ಪ :
ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ತ್ಯಾಗ ಬಲಿದಾನ ದೊಡ್ಡದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೊಳಿಸುವುದು ಸರ್ಕಾರದ ಸಂಕಲ್ಪ. ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ತೀರ್ಮಾನ ಮಾಡಲಾಗಿದೆ. ಕಿತ್ತೂರು ಚೆನ್ನಮ್ಮ ಟ್ರಸ್ಟ್ ಗೆ ₹ 50 ಕೋಟಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ರೈಲ್ವೆ ಯೋಜನೆಗೆ ಅನುಮೋದನೆ:
ಧಾರವಾಡದಿಂದ ಕಿತ್ತೂರಿನ ಮೂಲಕ ಬೆಳಗಾವಿಗೆ ರೈಲು ಸಂಪರ್ಕ ₹ 898 ಕೋಟಿ ರೈಲ್ವೆ ಯೋಜನೆಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸುರೇಶ್ ಅಂಗಡಿಯವರ ಕನಸನ್ನು ಈ ಮೂಲಕ ನನಸು ಮಾಡಲಾಗುತ್ತಿದೆ. ಈ ಭಾಗದಲ್ಲಿ ಮೂಲಭೂತ ಸೌಕರ್ಯ ಬೃಹತ್ ಮಟ್ಟದಲ್ಲಿ ವೃದ್ಧಿಸಲಾಗುತ್ತಿದೆ ಎಂದು ತಿಳಿಸಿದರು.