ಆರೋಪಿಸುವವರು ಬಿಟ್ ಕಾಯಿನ್ ಹಗರಣ ಏನೆಂದು ನಿಖರವಾಗಿ ತಿಳಿಸಲಿ: ಸಿಎಂ ಬೊಮ್ಮಾಯಿ
Publish Date: Sun, 14 Nov 2021 (19:56 IST)
Updated Date: Sun, 14 Nov 2021 (20:00 IST)
ಬಿಟ್ ಕಾಯಿನ್ ಹಗರಣದ ಕುರಿತು ಪ್ರಸ್ತಾಪ ಮಾಡುತ್ತಿರುವವರು ವಾಸ್ತವವಾಗಿ ಹಗರಣ ಏನೆಂದು ನಿಖರವಾಗಿ ತಿಳಿಸಲಿ. ಅದನ್ನು ಸಾಬೀತು ಪಡಿಸುವ ದಾಖಲೆಗಳನ್ನು ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿ, ಆರೋಪ ಸಾಬೀತು ಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, ಪ್ರತಿದಿನ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಬಯಸುವುದಿಲ್ಲ. ಈ ಕುರಿತು ಆರೋಪಗಳನ್ನು ಮಾಡುತ್ತಿರುವವರು ಹಗರಣ ಏನು ಹಾಗೂ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತಿಳಿಸಲಿ. ಈಗಾಗಲೇ 8-9 ತಿಂಗಳ ಹಿಂದೆಯೇ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಲಾಗಿದೆ. ಅಂತಾರಾಷ್ಟ್ರೀಯ ವಿಷಯವಾಗಿರುವುದರಿಂದ ಸಿಬಿಐನ ಇಂಟರ್ ಪೋಲ್ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಹಗರಣದ ಮೊತ್ತದ ಬಗ್ಗೆ ವಿಭಿನ್ನ ಹೇಳಿಕೆಗಳು ಬರುತ್ತಿವೆ. ಇದಕ್ಕೆ ಯಾವುದೇ ದಾಖಲೆಗಳ ಆಧಾರವಿಲ್ಲ. ನಮ್ಮ ಸರಕಾರ ಈ ವಿಷಯದಲ್ಲಿ ಮುಕ್ತವಾಗಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೂ ಇಲ್ಲ. ನಾವು ಯಾರೂ ಭಾಗಿಯಾಗಿಲ್ಲ. ಅವರ ಬಳಿ ಇರುವ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ನೀಡಲಿ. ತನಿಖೆಯಾಗಲಿ, ಸತ್ಯ ಹೊರಬರಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಇದರಿಂದ ಸಿಎಂ ಹುದ್ದೆಗೆ ಸಂಚಕಾರ ಬರಲಿದೆ ಎಂಬ ಪ್ರತಿಪಕ್ಷಗಳ ಹೇಳಿಕೆ ಕುರಿತ ಪ್ರಶ್ನೆಗೆ, ಇದು ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು.
ಮುಂದಿನ ಸುದ್ದಿ