ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನನಗೆ, ಡಿ.ಕೆ. ಸುರೇಶ್ ಅವರಿಗೆ ನೋಟಿಸ್ ಕೊಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಈ ರೀತಿ ನಡೆದುಕೊಳ್ಳುವ ಮೂಲಕ ನನ್ನನ್ನು ಹೆದರಿಸಬಹುದು ಎಂದುಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ದುಡ್ಡು ಕೊಡದೇ ಇನ್ಯಾರಿಗೆ ಕೊಡೋಣ ಎಂದು ಉಪ ಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಅವರು ಕರೆಯಬಾರದಿತ್ತು. ಎಲ್ಲ ವಿವರವನ್ನು ಜಾರಿ ನಿರ್ದೇಶನಾಲಯಕ್ಕೆ ಕೊಟ್ಟಿದ್ದು, ಚಾರ್ಜ್‌ಶೀಟ್‌ನಲ್ಲಿ ನಮ್ಮ ಹೆಸರು ಸೇರಿಸಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ದರು ಎಂದು ವಿವರಿಸಿದರು.
ಇನ್ನೂ ವಿರೋಧ ಪಕ್ಷಗಳು ಟೀಕೆ ಮಾಡುತ್ತಿರುವ ಕಾರ್ಟಿಯರ್ ವಾಚ್ ವಿಚಾರವಾಗಿ ಪ್ರತಿಕ್ರಿಯಿಸಿದ, ಯಾರು ಯಾವ ಶರ್ಟ್ ಹಾಕ್ತಾರೆ? ಯಾವ ವಾಚ್ ಹಾಕ್ತಾರೆ? ಯಾವ ಕನ್ನಡಕ ಹಾಕ್ತಾರೆ? ಈ ಬಗ್ಗೆ ನಾನು ಯಾರನ್ನೂ ಪ್ರಶ್ನೆ ಮಾಡಲ್ಲ. ಇವೆಲ್ಲ ಅವರ ವೈಯುಕ್ತಿಕ ವಿಚಾರಗಳು. ನಾನು ₹ 1 ಸಾವಿರದ ವಾಚು ಕಟ್ಟುತ್ತೇನೋ, ₹ 10 ಲಕ್ಷದ ವಾಚು ಕಟ್ಟುತ್ತೇನೋ ಅದು ನನಗೆ ಬಿಟ್ಟಿದ್ದು. ಅದು ನನ್ನ ಆಸ್ತಿ, ನನ್ನ ಕಷ್ಟ, ನನ್ನ ಶ್ರಮ ಎಂದು ಟೀಕೆಗಳಿಗೆ ಕೌಂಟರ್ ನೀಡಿದರು.