Select Your Language

Notifications

webdunia
webdunia
webdunia
webdunia

ಹಿಜಾಬ್ ಕುರಿತ ಹೇಳಿಕೆ ವಿಚಾರ: ಕ್ಷಮೆ ಕೋರಿದ ಶಾಸಕ ಝಮೀರ್ ಅಹ್ಮದ್

ಹಿಜಾಬ್ ಕುರಿತ ಹೇಳಿಕೆ ವಿಚಾರ: ಕ್ಷಮೆ ಕೋರಿದ ಶಾಸಕ ಝಮೀರ್ ಅಹ್ಮದ್
bangalore , ಮಂಗಳವಾರ, 15 ಫೆಬ್ರವರಿ 2022 (20:49 IST)
ಬೆಂಗಳೂರು: ಹಿಜಾಬ್ ಕುರಿತ ಹೇಳಿಕೆ ನೀಡಿದ್ದ ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್  ಕ್ಷಮೆಯಾಚಿಸಿದ್ದಾರೆ. 
ಈ ಕುರಿತು ಟ್ವೀಟ್ ಮಾಡಿರುವ ಅವರು,  ಶಿಕ್ಷಣಕ್ಕಿಂತ ಶಕ್ತಿಯುತವಾದ ಅಸ್ತ್ರ ಬೇರೆ ಇಲ್ಲ. ಆದುದರಿಂದ ಹಿಜಾಬ್ -ಬುರ್ಖಾದ ಕಾರಣ ನೀಡಿ ದಯವಿಟ್ಟು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಬೇಡಿ ಎಂದು ನಾನು ಸರಕಾರವನ್ನು ಮತ್ತು ಸಮಾಜವನ್ನು ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ - ಅತ್ಯಾಚಾರಗಳನ್ನು ಕಂಡಾಗ ಭಯ - ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹಿಜಾಬ್ - ಬುರ್ಖಾ ಧರಿಸುವುದರಿಂದಾದರೂ ಅತ್ಯಾಚಾರವನ್ನು ತಡೆಗಟ್ಟಬಹುದೇನೋ ಎಂಬ ಮಾತನ್ನು ನಾನು ಆಡಿದ್ದೆ ಎಂದು  ಹೇಳಿದ್ದಾರೆ.
ಯಾರ ಮನಸ್ಸನ್ನಾದರೂ ನೋಯಿಸುವ ಇಲ್ಲವೇ ಅಗೌರವ ತೋರಿಸುವ ದುರುದ್ದೇಶದಿಂದ ಹೇಳಿದ್ದಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವುದು. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ತಿಳಿಸಿದ್ದಾರೆ.
ಹಿಜಾಬ್ - ಬುರ್ಖಾ ಧರಿಸುವುದನ್ನು ಧಾರ್ಮಿಕ ಕಟ್ಟಳೆಯನ್ನಾಗಿ ಮಾಡಿದ ನಮ್ಮ ಹಿರಿಯರ ಉದ್ದೇಶವೂ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನಿಂದ ಆ ಮಾತುಗಳು ಬಂತು. ಇದರ ಹೊರತಾಗಿ ಬೇರೆ ಯಾವ ದುರುದ್ದೇಶವೂ ನನಗಿರಲಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇತ್ತೀಚೆಗೆ ಅರ್ಧ ಹೆಲ್ಮೆಟ್ ಬದಲು ಫುಲ್ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ನಿಲುವಿನ ಹಿಂದೆ ಜನರ ಜೀವ ರಕ್ಷಣೆಯ ಉದ್ದೇಶ ಹೇಗಿದೆಯೋ ಹಾಗೆಯೇ ನನ್ನ ಹೇಳಿಕೆ ಹಿಂದೆ ಹೆಣ್ಣು ಮಕ್ಕಳ ಬಗೆಗಿನ ಕಾಳಜಿ ಇದೆ ಎಂದು ಅವರು ತಿಳಿಸಿದ್ದಾರೆ.
ಹೌದು, ಹೆಣ್ಣು ಮಕ್ಕಳ ಅತ್ಯಾಚಾರಕ್ಕೆ ಅವರ ಮೈಮೇಲಿನ ಬಟ್ಟೆ ಖಂಡಿತ ಕಾರಣ ಅಲ್ಲ, ಮೈ ತುಂಬಾ ಬಟ್ಟೆ ಹಾಕಿದರೂ, ಹಾಕದೆ ಇದ್ದರೂ ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಲವು ಪುರುಷರಲ್ಲಿರುವ ರೇಪಿಸ್ಟ್ ಮನಸ್ಥಿತಿ. 
ಹೆಣ್ಣುಮಕ್ಕಳ ಅತ್ಯಾಚಾರ ಕಡಿಮೆಯಾಗಬೇಕಾದರೆ ಮೊದಲು ಪುರುಷರು ಬದಲಾಗಬೇಕು ಎಂದು ಅವರು ತಿಳಿಸಿದ್ದಾರೆ.
ಹೆಣ್ಣುಮಕ್ಕಳಿಗೆ ನಿಜವಾದ ರಕ್ಷಣೆ ನೀಡುವುದು ಶಿಕ್ಷಣ ಮಾತ್ರ ಎಂದು ನನ್ನ ಅಭಿಪ್ರಾಯ. ಹಿಜಾಬ್ - ಬುರ್ಖಾ ಧರಿಸಿಯಾದರೂ ಒಮ್ಮೆ ಅವರು ಶಿಕ್ಷಣ ಪಡೆಯಲಿ. ಆ ಶಿಕ್ಷಣದ ಬಲದಿಂದ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಿದಾಗ ಸಮಸ್ಯೆ ಬಗೆಹರಿಸಲು ಸಾಧ್ಯ: ಸಿಎಂ