ಬೆಂಗಳೂರು: ಭಾರತೀಯ ಜನತಾ ಪಕ್ಷ ಸೇರ್ಪಡೆ ಕುರಿತಂತೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಪ್‌ಡೇಟ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ನಾನು ಬಿಜೆಪಿಗೆ ಮರಳುವುದಿಲ್ಲ. ಮೊದಲು ಬಿಜೆಪಿಯಲ್ಲಿನ ಪರಿಸ್ಥಿತಿ ಸರಿ ಹೋಗಬೇಕು ಎನ್ನುವ ಮೂಲಕ ತನ್ನ ಮಾತೃ ಪಕ್ಷದ ಬಗ್ಗೆ ಮೃದುವಾಗಿ ಮಾತನಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೆ ಈಶ್ವರಪ್ಪ ಹೇಳಿಕೆ ಮಹತ್ವ ಪಡೆದಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಹ್ವಾನ ಕೊಟ್ಟಿರುವ ಬಗ್ಗೆ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನ ಮತ್ತು ಬಿ.ಎಸ್. ಯಡಿಯೂರಪ್ಪ ಸ್ನೇಹ ಬಹಳ ಹಳೆಯದು. ನಾವಿಬ್ಬರೂ ಪಾರ್ಟ್‌ನರ್‌ಶಿಪ್‌ನಲ್ಲಿ ಹಿಂದೆ ಫ್ಯಾಕ್ಟರಿ ಮಾಡಿದ್ದೆವು. ನಮ್ಮಿಬ್ಬರ ಮಧ್ಯೆ ಸ್ನೇಹ ಮುಂದುವರೀತಿದೆ. ರಾಜಕಾರಣಕ್ಕೂ ಸ್ನೇಹಕ್ಕೂ ಸಂಬಂಧ ಇಲ್ಲ. ನನ್ನ ಹುಟ್ಟುಹಬ್ಬಕ್ಕೆ ಪತ್ರಿಕೆಯಲ್ಲೂ ಅವರು ಶುಭಾಶಯ ಕೋರಿಕೆ ಹಾಕಿಸಿದ್ದರು. ನಮ್ಮ ಮನೆಯ ಕಾರ್ಯಕ್ರಮಗಳಿಗೆ ಅವರು ಬಂದಿದ್ದಾರೆ. ಅವರ ಮನೆ ಕಾರ್ಯಕ್ರಮಗಳಿಗೆ ನಾವು ಹೋಗಿದ್ದೇವೆ. ಸ್ನೇಹ ಬೇರೆ ರಾಜಕಾರಣ ಬೇರೆ ಎಂದರು..