Select Your Language

Notifications

webdunia
webdunia
webdunia
webdunia

ನಗರದ ಕೆಂಗೇರಿಯ ಕೆ.ಎಚ್.ಬಿ ಬಂಡೇಮಠ ಬಡಾವಣೆ ಬಿಬಿಎಂಪಿಗೆ ಹಸ್ತಾಂತರಿಸಲು ಸಿ.ಎಂ ಗೆ ಮನವಿ

ನಗರದ ಕೆಂಗೇರಿಯ ಕೆ.ಎಚ್.ಬಿ ಬಂಡೇಮಠ ಬಡಾವಣೆ ಬಿಬಿಎಂಪಿಗೆ ಹಸ್ತಾಂತರಿಸಲು ಸಿ.ಎಂ ಗೆ ಮನವಿ
bangalore , ಭಾನುವಾರ, 11 ಜುಲೈ 2021 (15:03 IST)
ಬೆಂಗಳೂರು: ನಗರದ ಕೆಂಗೇರಿಯ ಬಂಡೇಮಠ ಕೆ.ಎಚ್.ಬಿ. ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು ಮತ್ತು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು  ಸ್ಥಳೀಯ ನಾಗರಿಕರು ಇಂದು ಮನವಿ ಮಾಡಿದರು
 
30ನೇ ರಸ್ತೆಯ ಬಳಿ ಉದ್ಯಾನವನಕ್ಕೆಂದು ಮೀಸಲಿಟ್ಟಿರುವ ಪ್ರದೇಶದಲ್ಲಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಂಡು ಕೋವಿಡ್ ಶಿಷ್ಟಾಚಾರ ಪಾಲನೆಯೊಂದಿಗೆ ಪ್ರತಿಭಟನೆ ನೆಡೆಸಿದ ಸ್ಥಳೀಯ ನಿವಾಸಿಗಳು, 15 ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿದ ಈ ಬಡಾವಣೆ ಅವ್ಯವಸ್ಥೆಯ ಆಗರವಾಗಿದ್ದು ಕೂಡಲೇ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು ಎಂಬ ಮನವಿ ಮಾಡಿದರು.
 
ಈ ಸಂಬಂಧ ಮುಖ್ಯಮಂತ್ರಿ ಮತ್ತು ಸ್ಥಳೀಯ ಶಾಸಕರಾದ ಎಸ್.ಟಿ. ಸೋಮಶೇಖರ್ ರಿಗೆ ಇ-ಮೇಲ್ ಮೂಲಕ ಲಿಖಿತ ಮನವಿ ಪತ್ರ ಸಲ್ಲಿಸಿದ ಸ್ಥಳೀಯರು, ಬಡಾವಣೆಯಲ್ಲಿ ರಸ್ತೆಗೆ ಹಾಕಿದ ಡಾಂಬರು, ಕಳಪೆ ಕಾಮಗಾರಿಯಿಂದಾಗಿ ಟಾರು ಹಾಕಿದ ಒಂದೇ ತಿಂಗಳಿಗೇ ಕಿತ್ತು ಬಂದಿದೆ. ಹಳ್ಳದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಅಪಘಾತ ಆಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಬಡಾವಣೆಯ ಬಹುತೇಕ ವಿದ್ಯುತ್ ಕಂಬಗಳಲ್ಲಿ ಬೀದಿ ದೀಪಗಳೂ ಇಲ್ಲ. ರಾತ್ರಿ ಕಗ್ಗತ್ತಲ ಖಂಡದಂತೆ ಗೋಚರಿಸುತ್ತದೆ ಎಂದು ದೂರಿದರು.
 
ಕೆ-ಕಸ ಎಚ್-ಹಾಕೋ ಬಿ-ಬಡಾವಣೆ ಎಂಬಂತಾಗಿದೆ, ಎಲ್ಲ ರಸ್ತೆಯಲ್ಲೂ ಕಸದ ರಾಶಿ ರಾಶಿ ಕಾಣುತ್ತದೆ, ಸ್ವಚ್ಛತೆ ಎಂಬುದೇ ಬಡಾವಣೆಯಲ್ಲಿ ಇಲ್ಲವಾಗಿದೆ. ಇನ್ನು ಈ ಕಸದ ರಾಶಿಗೆ ಕೆಲವರು ಬೆಂಕಿ ಹಚ್ಚುವ ಕಾರಣ ದಟ್ಟ ಹೊಗೆಯಿಂದ ವಯಸ್ಸಾದವರು, ಆಸ್ತಮಾ ರೋಗಿಗಳು ಉಸಿರಾಡಲೂ ಆಗದೆ ಪರದಾಡುವಂತಾಗಿದೆ ಎಂದು ದೂರಿದ್ದಾರೆ.
ಬಡಾವಣೆಯಲ್ಲಿ ಉದ್ಯಾನವನಕ್ಕೆಂದು ಜಾಗ ಮೀಸಲಿಟ್ಟಿದ್ದರೂ ತಂತಿ ಬೇಲಿ ಹಾಕಿರುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಆಗಿಲ್ಲ, ಇಲ್ಲಿ ಗಿಟಗಂಟಿ ಬೆಳೆದು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ. ಬಡಾವಣೆಯವರು ನಕ್ಷೆ ಮಂಜೂರಾತಿದೆ ಬಿಬಿಎಂಪಿಗೆ ಲಕ್ಷಗಟ್ಟಲೆ ಹಣ ಕಟ್ಟುತ್ತಿದ್ದೇವೆ. ಆದರೂ ಬಿಬಿಎಂಪಿಯವರು ಕೆ.ಎಚ್.ಬಿ. ತಮಗೆ ಇನ್ನೂ ಬಡಾವಣೆ ಹಸ್ತಾಂತರಿಸಿಲ್ಲ ಹೀಗಾಗಿ ತಮಗೂ ಈ ಬಡಾವಣೆಗೂ ಸಂಬಂಧ ಇಲ್ಲ ಎನ್ನುತ್ತಾರೆ. ಕೆ.ಎಚ್.ಬಿ. ಅಧಿಕಾರಿಗಳು ಬಡಾವಣೆಯ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರಿಬ್ಬರ ಜಗಳದಲ್ಲಿ ನಾವು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
2020ರಲ್ಲಿ ವಿಧಾನಸಭೆಯಲ್ಲೇ ವಸತಿ ಸಚಿವರು ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದರು. ಆದರೆ ಒಂದೂವರೆ ವರ್ಷವಾದರೂ ಆ ಪ್ರಕ್ರಿಯೆ ಮುಗಿದಿಲ್ಲ. ಕೂಡಲೇ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ವಿರಳ